ನವದೆಹಲಿ: ಮುಂದಿನ ಯುದ್ಧಗಳನ್ನು ಎದುರಿಸಲು ಮತ್ತು ಗೆಲ್ಲಲು ಭಾರತವು ಸ್ವದೇಶಿ ಶಸ್ತ್ರಾಸ್ತ್ರಗಳನ್ನೇ ಬಳಸಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ನ ನಿರ್ದೇಶಕರ 41ನೇ ಸಮಾವೇಶದಲ್ಲಿ ಮಾತನಾಡಿರುವ ಅವರು, ಶಸ್ತ್ರಾಸ್ತ್ರಗಳು ಮತ್ತು ಇತರ ಯುದ್ಧ ಪರಿಕರಗಳನ್ನು ಅಭಿವೃದ್ಧಿಪಡಿಸುವಾಗ ಭವಿಷ್ಯದಲ್ಲಿ ಎದುರಿಸಬೇಕಾದ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ಡಿಆರ್ಡಿಒ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಮೂಲಕವೇ ಭಾರತ ಯುದ್ಧಗಳನ್ನು ಎದುರಿಸಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭವಿಷ್ಯದ ಯುದ್ಧಗಳಿಗಾಗಿ ನಾವು ಈಗಿನಿಂದಲೇ ಸಿದ್ಧತೆ ನಡೆಸಬೇಕಿದ್ದು, ಸಂಪರ್ಕ ರಹಿತ ಯುದ್ಧ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಸೈಬರ್, ಬಾಹ್ಯಾಕಾಶ, ಲೇಸರ್, ಎಲೆಕ್ಟ್ರಾನಿಕ್ ಮತ್ತು ರೋಬೋಟಿಕ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಉಪಯೋಗವನ್ನು ನಾವು ಬಹಳ ಅಗತ್ಯವಾಗಿ ಯುದ್ಧಗಳಿಗೆ ಬಳಸಿಕೊಳ್ಳಬೇಕಿದೆ. ಇದಕ್ಕೆ ಇನ್ನು ತಡ ಮಾಡುವಂತಿಲ್ಲ ಎಂದು ರಾವತ್ ಹೇಳಿದರು.
ಇದೇ ವೇಳೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸಾಧನೆಗಳನ್ನು ಶ್ಲಾಘಿಸಿದ ಬಿಪಿನ್ ರಾವತ್, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತವು ಹೆಚ್ಚಿನ ಪ್ರಗತಿ ಸಾಧಿಸಲು ಡಿಆರ್ಡಿಒ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.