ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು-ಕಾಶ್ಮೀರ ಕುರಿತು ಐತಿಹಾಸಿಕ ಘೋಷಣೆ ಮಾಡಿದ್ದು, ಇದುವರೆಗೂ ಒಂದು ರಾಜ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ.
ಜಮ್ಮು-ಕಾಶ್ಮೀರಕ್ಕೆ ಕಲಂ 370, 35ಎ ಅಡಿ ಈವರೆಗೂ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ರದ್ದುಗೊಳಿಸಲಾಗಿದ್ದು, ಈ ತಿದ್ದುಪಡಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ಜಮ್ಮು ಕಾಶ್ಮೀರಕ್ಕೆ ಈವರೆಗೂ ಇದ್ದ ವಿಶೇಷ ಅಧಿಕಾರ ಮತ್ತು ವಿಶೇಷ ಸ್ಥಾನಮಾನ ಸಂಪೂರ್ಣ ರದ್ದಾಗಿದೆ.
ಕಣಿವೆ ರಾಜ್ಯಕ್ಕೆ ಅನ್ವಯವಾಗಿದ್ದ ಸಂವಿಧಾನದ 370 ಮತ್ತು 35ಎ ಪರಿಚ್ಛೇದಗಳನ್ನು ರದ್ದುಗೊಳಿಸುವ ಮೂಲಕ ವಿಶೇಷ ಸ್ಥಾನಮಾನ ಹಾಗೂ ವಿಶೇಷಾಧಿಕಾರವನ್ನು ರದ್ದುಗೊಳಿಸುವ ಪ್ರಸ್ತಾವನೆಯನ್ನು ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಇಂದು ಮಂಡನೆ ಮಾಡಿದರು. ಆಡಳಿತಾತ್ಮಕ ದೃಷ್ಟಿಯಿಂದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಮೂರು ವಿಭಾಗಗಳಾಗಿ ವಿಂಗಡಣೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದುವರೆಗೂ ಜಮ್ಮು ಮತ್ತು ಕಾಶ್ಮೀರ ಒಂದು ರಾಜ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಜಮ್ಮುಮತ್ತು ಕಾಶ್ಮೀರ ಇನ್ನು ಮುಂದೆ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು-ಕಾಶ್ಮೀರದಿಂದ ಬೇರ್ಪಟ್ಟ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಕಾರ್ಯನಿರ್ವಹಿಸಲಿವೆ. ಲಡಾಖ್ ನಲ್ಲಿ ವಿಧಾನಸಭೆ ಇರುವುದಿಲ್ಲ. ನೇರವಾಗಿ ಕೇಂದ್ರ ಸರ್ಕಾರ ಅಲ್ಲಿ ಆಡಳಿತ ನಡೆಸಲಿದೆ.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿದ್ದಂತೆ ಸ್ಥಳೀಯ ರಾಜಕೀಯ ಪಕ್ಷಗಳ ಆಟಕ್ಕೆ ತೆರೆ ಬೀಳಲಿದ್ದು, ಜಮ್ಮು-ಕಾಶ್ಮೀರದ ಅಧಿಕಾರ ಕೇಂದ್ರ ಸರ್ಕಾರದ ಕೈ ಸೇರಲಿದೆ. ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಇದ್ದರೂ ಕೂಡ ದೆಹಲಿ ಸರ್ಕಾರದಂತೆ ಜಮ್ಮು-ಕಾಶ್ಮೀರ ಸರ್ಕಾರ ಕೆಲಸ ಮಾಡಲಿದೆ.