ಭೋಪಾಲ್: ಶನಿವಾರ ಸಂಜೆಯಿಂದ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಸೋಮವಾರ ಮಧ್ಯಪ್ರದೇಶದ 11 ಜಿಲ್ಲೆಗಳ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ರಾಜ್ಯದ ಕನಿಷ್ಠ 32 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಭೋಪಾಲ್, ಸಾಗರ್, ಹರ್ದಾ, ರೈಸನ್, ವಿದಿಶಾ, ಸೆಹೋರ್, ರಾಜ್‌ಗಢ, ಬೈತುಲ್, ದೇವಾಸ್ ಮತ್ತು ಅಶೋಕ್‌ನಗರ ಸೇರಿದಂತೆ ಈ 32 ಜಿಲ್ಲೆಗಳಲ್ಲಿ ಆರೆಂಜ್(ಕಿತ್ತಳೆ) ಅಲರ್ಟ್ ಘೋಷಿಸಲಾಗಿದ್ದು, ಈ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯಾವುದೇ ಅಹಿತಕರ ಘಟನೆಗೆ ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಭೋಪಾಲ್, ಸಾಗರ್, ಹರ್ಡಾ, ರೈಸನ್, ವಿದಿಶಾ, ಮಂಡ್ಲಾ, ಬಾಲಘಾಟ್, ಜಬಲ್ಪುರ್, ಸಿಯೋನಿ, ಉಜ್ಜಯಿನಿ, ಮತ್ತು ನರಸಿಂಗಪುರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಯಾ ಜಿಲ್ಲೆಗಳ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಈಶಾನ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಯಲ್ಲಿ ಕಡಿಮೆ-ಒತ್ತಡದ ಪ್ರದೇಶವು ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಸೈಕ್ಲೋನಿಕ್ ಪ್ರಸರಣವು ಸಮುದ್ರ ಮಟ್ಟಕ್ಕಿಂತ ಸರಾಸರಿ 7.6 ಕಿ.ಮೀ ವರೆಗೆ ವಿಸ್ತರಿಸುತ್ತಿದೆ. ಇದು ನೈಋತ್ಯ ದಿಕ್ಕಿನಲ್ಲಿ ಎತ್ತರಕ್ಕೆ ಓರೆಯಾಗುತ್ತದೆ ಎಂದು ಐಎಂಡಿ ತನ್ನ ಅಖಿಲ ಭಾರತ ಹವಾಮಾನ ಬುಲೆಟಿನ್ ನಲ್ಲಿ ತಿಳಿಸಿದೆ.
ಬಲವಾದ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಈ ಬಲವಾದ ವಾಯು ಸೋಮವಾರ ನೈರುತ್ಯ ಮತ್ತು ಪಕ್ಕದ ಪಶ್ಚಿಮ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಭೋಪಾಲ್‌ನಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಬೆಳಿಗ್ಗೆ 8:30 ರಿಂದ ಸಂಜೆ 5:30 ರ ನಡುವೆ ಭೋಪಾಲ್‌ಗೆ 62.1 ಮಿಲಿಮೀಟರ್ ಮಳೆಯಾಗಿದೆ ಎಂದು ಐಎಂಡಿ ಅಧಿಸೂಚನೆ ತಿಳಿಸಿದೆ. ಭಾರಿ ಮಳೆಯಿಂದಾಗಿ ರಾಜಧಾನಿಯ ಕಲಿಯಾಸೋಟೆ ಜಲಾಶಯದ 13 ಗೇಟ್‌ಗಳಲ್ಲಿ ಕನಿಷ್ಠ ಐದು ಗೇಟ್‌ಗಳನ್ನು ತೆರೆಯಲಾಗಿದೆ. ಸತತ ಮಳೆಯಿಂದಾಗಿ ರಾಜ್ಯ ನದಿಗಳು ಉಕ್ಕಿ ಹರಿಯುವುದನ್ನು ನೋಡಿ ಭದಭಡ ಅಣೆಕಟ್ಟಿನ ಗೇಟ್‌ಗಳನ್ನು ಸಹ ತೆರೆಯಲಾಯಿತು ಎಂದು ಹೇಳಲಾಗಿದೆ.
ಭೋಪಾಲ್‌ನ ಫಂಡಾ ಗ್ರಾಮದಲ್ಲಿ ಭಾನುವಾರ ಸುರಿಯುತ್ತಿರುವ ಮಳೆಯಿಂದಾಗಿ ಎರಡು ವರ್ಷದ ಬಾಲಕಿ ಉಕ್ಕಿ ಹರಿಯುವ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. "ಬಾಲಕಿ ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ಘೋಷಿಸಿದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.