ನವದೆಹಲಿ: 2019ರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ನೂತನ ಸಂಸದರ ಸಭೆಯು ಶನಿವಾರ ಸದೆಯುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಗುರುವಾರ ನಿರ್ಣಯವನ್ನು ಜಾರಿಗೊಳಿಸಿದ್ದು, ಪಕ್ಷದ ಸಿದ್ಧಾಂತವನ್ನು ಬೆಂಬಲಿಸಿದ ಜನರಿಗೆ ಧನ್ಯವಾದ ಹೇಳಿದೆ.
ಅಲ್ಲದೆ, ನೂತನವಾಗಿ ಚುನಾಯಿತರಾಗಿರುವ ಎಲ್ಲಾ ಸಂಸದರು ಮೋದಿ ಅವರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಲು ಶನಿವಾರ ಸಭೆ ನಡೆಸಲಿದ್ದಾರೆ. ಬಳಿಕ ನೂತನ ಸರ್ಕಾರ ರಚನೆ ಸಂಬಂಧ ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಪ್ರಕ್ರಿಯೆ ಬಳಿಕ ನೂತನ ಸರ್ಕಾರದ ಪ್ರಮಾಣ ವಚನ್ ಸಮಾರಂಭ ನಡೆಯಲಿದೆ.
ರಾಷ್ಟ್ರೀಯತೆ, ಭದ್ರತೆ, ಹಿಂದೂ ಹೆಮ್ಮೆ ಮತ್ತು ನ್ಯೂ ಇಂಡಿಯಾ ಸಂದೇಶಗಳನ್ನು ಸಂಪೂರ್ಣವಾಗಿ ಬೆಂಬಲಿಸಿದ ದೇಶದ ಜನತೆ ಮೋದಿ ನೇತೃತ್ವದ ಸರ್ಕಾರ ರಚನೆಗೆ ಎರಡನೇ ಬಾರಿಗೆ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 300 ಕ್ಕಿಂತಲೂ ಅಧಿಕ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.