ಮುಂಬಯಿ : 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ತನ್ನೊಂದಿಗೆ ನಡೆದುಕೊಂಡ ರೀತಿ ಮತ್ತು ಅವರ ವರ್ತನೆ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಿಲಿಂದ್ ದಿಯೋರಾಗೆ ಬರೆದ ಪತ್ರವನ್ನು ಸಮರ್ಥಿಸಿಕೊಂಡಿರುವ ಬಾಲಿವುಡ್ ನಟಿ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್, ಪಕ್ಷದ ಹಿತಾಸಕ್ತಿಗಾಗಿ ಪತ್ರ ಬರೆದಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಊರ್ಮಿಳಾ, "ನಾನು ಪಕ್ಷದ ಹಿತಾಸಕ್ತಿ ದೃಷ್ಟಿಯಿಂದ, ಪಕ್ಷದ ಅಭ್ಯುದಯಕ್ಕಾಗಿ, ಪತ್ರ ಬರೆದು ದಿಯೋರಾ ಅವರನ್ನು ಎಚ್ಚರಿಸಿದ್ದೆ. ನಾನು ಪಕ್ಷ ಸೇರಿದ್ದು ದೇಶ ಸೇವೆಯ ಉದ್ದೇಶಕ್ಕಾಗಿಯೇ ಹೊರತು ಸ್ವಂತ ಹಿತಾಸಕ್ತಿಗಾಗಿ ಅಲ್ಲ. ಅಲ್ಲದೆ, ಆ ಪತ್ರವನ್ನು ಚುನಾವಣಾ ಫಲಿತಾಂಶ ಬಹಿರಂಗಕ್ಕೆ ಮೊದಲೇ ನಾನು ಬರೆದಿದ್ದು, ಅದು ನನ್ನ ಪ್ರಾಮಾಣಿಕ ಕಾಳಜಿಗೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಮಾರ್ಚ್ 27ರಂದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್, ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿ ವಿರುದ್ಧ 4.5 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು.