ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸಾಂವಿಧಾನಿಕ ಪೀಠದಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ.
Supreme Court allows entry of women in Kerala’s #Sabarimala temple. pic.twitter.com/I0zVdn0In1
— ANI (@ANI) September 28, 2018
ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಶುಕ್ರವಾರ ಮತ್ತೊಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಭಾರತದಲ್ಲಿ ಮಹಿಳೆಯರನ್ನು ದೇವತೆಯಂತೆ ನೋಡಲಾಗುತ್ತದೆ. ಮಹಿಳೆಯರು ಪುರುಷರಿಗೆ ಸಮಾನ ಎಂದು ತಿಳಿಸಿದೆ.
ಮಹಿಳೆಯರನ್ನು ಯಾವಾಗಲು ತಾರತಮ್ಯದಿಂದ ಕಾಣಲಾಗುತ್ತದೆ. ಮಹಿಳೆಯರು ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಬಗೆಗಿನ ಗ್ರಹಿಕೆ ಬದಲಾಗಬೇಕು. ಮಹಿಳೆ ಪುರುಷನ ಅಡಿಯಾಳಲ್ಲ. ದೇವರ ಪ್ರಾರ್ಥನೆಗೆ ಯಾವುದೇ ಬೇಧ-ಭಾವವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.
ಅಯ್ಯಪ್ಪ ಸ್ವಾಮಿ ದೇಗುಲದ ಒಳಗೆ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ನಿಯಮ 800 ವರ್ಷಗಳ ಹಿಂದಿನಿಂದಲೂ ಇದೆ. ಈ ಲಿಂಗ ತಾರತಮ್ಯವುಳ್ಳ ಕ್ರಮವನ್ನು ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಶಿಯೇಶನ್ 2006ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಮಹಿಳೆಯರಿಗೆ ನಿಷೇಧ ಹೇರಿರುವುದು ಸಂಪ್ರದಾಯ ಅಥವಾ ಹಿಂದೂ ಧರ್ಮದ ನಿಯಮ ಪಾಲನೆ ಅಲ್ಲ. ಇದು ಮಹಿಳೆಯರ ವಿರುದ್ಧ ಅನುಸರಿಸುವ ತಾರತಮ್ಯ ನೀತಿ ಎಂದು ವಾದ ಮಂಡಿಸಿತು.
ಜೊತೆಗೆ ಋತುಮತಿಯಾದ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಬಗ್ಗೆಯೂ ತಕರಾರು ಪ್ರತ್ಯೇಕ ಅರ್ಜಿ ಸಲ್ಲಿಸಿತು. ಈ ಪ್ರಕರಣದ ವಿಚಾರಣೆ ವೇಳೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಸಾಂವಿಧಾನಿಕ ಪೀಠ ಅಸಮಾಧಾನ ಹೊರಹಾಕಿತ್ತು. ಋತುಮತಿಯಾದ ಮಹಿಳೆಯರು ಅಪವಿತ್ರಳು. ಆದಕಾರಣ ಅವರು ದೇವಸ್ಥಾನ ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಬಂಧ ವಿಧಿಸಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ವಾದ ಮಂಡಿಸಿದಾಗ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಯಾವ ಆಧಾರದ ಮೇಲೆ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದೀರಿ ಎಂದು ಪೀಠವು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಚಾಟಿ ಬೀಸಿತ್ತು. ಈ ವೇಳೆ ಸಾರ್ವಜನಿಕರಿಗೆ ಮೀಸಲಾದ ದೇವಸ್ಥಾನಕ್ಕೆ ಪುರುಷ ಮತ್ತು ಮಹಿಳೆಯರು ಯಾರು ಬೇಕಾದರೂ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯ ಪಟ್ಟಿದ್ದರು.
ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕಿದೆ. ಅದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಅಡಿ ಮಹಿಳೆಯರಿಗೂ ಮುಕ್ತ ಅವಕಾಶ ನೀಡಬೇಕು. ಲಿಂಗ ತಾರತಮ್ಯ ಸರಿಯಲ್ಲ ಎಂದು ಸಾಂವಿಧಾನಿಕ ಪೀಠದ ಮತ್ತೊರ್ವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠವು 2017 ರ ಅಕ್ಟೋಬರ್ ನಲ್ಲಿ ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರೀಮನ್, ಎ.ಎಂ. ಖಾನ್ವೀಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂಧು ಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಸುದೀರ್ಘ ವಿಚಾರಣೆ ಮಾಡಿ ಇದೇ ಆಗಸ್ಟ್ 1 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತನ್ನ ಐತಿಹಾಸಿಕ ತೀರ್ಪುನ್ನು ಪ್ರಕಟಿಸಿದೆ.