ನವದೆಹಲಿ: ಕೇಂದ್ರ ಸರ್ಕಾರವು ಅಂತರಾಷ್ಟ್ರೀಯ ಕಾನೂನಿನನುಸಾರವಾಗಿ ದೇಶದೆಲ್ಲೆಡೆ ಇರುವ ಅಕ್ರಮ ವಲಸೆಗಾರರನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಬುಧುವಾರದಂದು ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯ ಜಾವೇದ್ ಅಲಿಖಾನ್ ಇತರ ರಾಜ್ಯದಲ್ಲಿಯೂ ಕೂಡ ರಾಷ್ಟ್ರೀಯ ನಾಗರೀಕ ನೋಂದಣಿ ಅನ್ವಯವಾಗಲಿದಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಷಾ 'ಇದು ಉತ್ತಮ ಪ್ರಶ್ನೆ, ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ಈಗ ಅಸ್ಸಾಂ ಒಡಂಬಡಿಕೆ ಭಾಗವಾಗಿದೆ.ಅಲ್ಲದೆ ಬಿಜೆಪಿ ಪ್ರನಾಳಿಕೆ ಭಾಗವಾಗಿದೆ. ಸರ್ಕಾರ ದೇಶದ ಎಲ್ಲ ಭಾಗಗಳಲ್ಲಿರುವ ಅಕ್ರಮ ವಲಸೆಗಾರರನ್ನು ಗುರುತಿಸುತ್ತದೆ. ಅಂತರಾಷ್ಟ್ರೀಯ ಕಾನೂನಿನ ಅನುಗುಣವಾಗಿ ಅವರನ್ನು ಹೊರಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಈ ಕಾಯ್ದೆಯ ಡೆಡ್ ಲೈನ್ ನ್ನು ವಿಸ್ತರಿಸುವ ಕುರಿತಾಗಿ ಸಾಕಷ್ಟು ಮನವಿಗಳು ಬಂದಿವೆ ಎಂದು ಅವರು ಹೇಳಿದರು. ದೇಶದಲ್ಲಿರುವ ರೋಹಿಂಗ್ಯಾಗಳ ನಿಖರ ಸಂಖ್ಯೆ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ' ಈಗ ನಮ್ಮಲ್ಲಿ ನಿಖರವಾದ ಅಂಕಿ ಅಂಶಗಳಿಲ್ಲ,ಅವರು ದೇಶದ ಎಲ್ಲೆಡೆ ವಾಸವಾಗಿದ್ದಾರೆ. ಕೆಲವರು ಬಾಂಗ್ಲಾದೇಶಕ್ಕೆ ಹಿಂದಿರುಗಿ ಹೋಗಿದ್ದಾರೆ ಎಂದು ಹೇಳಿದರು.