ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುರಿತ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಒಮರ್ ಅಬ್ದುಲ್ಲಾ ಅವರ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಈಗ ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ 370ನೇ ವಿಧಿಯನ್ನು ತೆಗೆದುಹಾಕಿ ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರವು ಕಾನೂನು ಬಾಹಿರ ಎಂದು ಹೇಳಿದೆ.ಈಗ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ನ್ಯಾಷನಲ್ ಕಾನ್ಫರೆನ್ಸ್ ನ ಸಂಸದರಾದ ಅಕ್ಬರ್ ಲೋನ್ ಮತ್ತು ಹಸ್ನೈನ್ ಮಸೂಡಿ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೊದಲು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನೂರಾರು ರಾಜಕೀಯ ಮುಖಂಡರನ್ನು ಬಂಧಿಸಲಾಗಿತ್ತು. ಅಲ್ಲದೆ ಯಾವುದೇ ತೊಂದರೆಯಾಗದಂತೆ ರಾಜ್ಯಾದ್ಯಂತ ಸಾವಿರಾರು ಸೈನಿಕರನ್ನು ನಿಯೋಜಿಸಲಾಗಿತ್ತು.
ಲಡಾಖ್ನ ಬಿಜೆಪಿ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಪರ್ವತ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ದರು. 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಸರ್ಕಾರದ ಕ್ರಮ ಕುರಿತು ಚರ್ಚೆಯಲ್ಲಿ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣ ಎಲ್ಲರ ಗಮನ ಸೆಳೆದಿತ್ತು.
'ಇಂದು ಲಡಾಖ್ ಏಕೆ ಅಭಿವೃದ್ಧಿಯಾಗಿಲ್ಲವೆಂದರೆ ಇದಕ್ಕೆ ಪ್ರಮುಖ ಕಾರಣ ಆರ್ಟಿಕಲ್ 370 ಮತ್ತು ಕಾಂಗ್ರೆಸ್ ಪಕ್ಷ 'ಎಂದು ಈ ವಾರದ ಆರಂಭದಲ್ಲಿ ಸಂಸತ್ತಿನಲ್ಲಿ ನಮ್ಗ್ಯಾಲ್ ಹೇಳಿದರು, ಏಳು ದಶಕಗಳಿಂದ ಲಡಾಖ್ ಜನರು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು.