ನವದೆಹಲಿ: ರೈಲ್ವೆಯನ್ನು ಖಾಸಗಿಕರಣಕ್ಕೆ ಒಳಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ರೈಲ್ವೆ ಇಲಾಖೆ ಖಾಸಗಿ ಆಪರೇಟರ್ ಗಳಿಗೆ ಮಣೆ ಹಾಕಲಾಗುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಈಗ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ, ಆದರೆ ತನ್ನ 100 ದಿನಗಳ ಯೋಜನೆಯಲ್ಲಿ ಐಆರ್‌ಸಿಟಿಸಿಗೆ ಎರಡು ರೈಲುಗಳನ್ನು ನೀಡುವುದಾಗಿ ಪ್ರಸ್ತಾಪಿಸಿದೆ, ಸಾಗಾಣಿಕೆ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಲು, ಟಿಕೆಟಿಂಗ್, ಆನ್‌ಬೋರ್ಡ್ ಸೇವೆಗಳನ್ನು ಅದು ಒದಗಿಸಲಿದೆ ಎಂದು ಪಿಯುಶ್ ಗೋಯಲ್ ಹೇಳಿದರು. ಈ ಯೋಜನೆ ಅಡಿಯಲ್ಲಿ ರೈಲುಗಳು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸಚಿವರು ವಿವರಿಸಿದರು.
ಸಮಾಜವಾದಿ ಪಕ್ಷದ ಸಂಸದ ಸುರೇಂದ್ರ ನಾಥ್ ನಗರ ರಾಜಧಾನಿ ಮತ್ತು ಶತಾಬ್ಡಿಯಂತಹ ರೈಲುಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಯೋಜಿಸುತ್ತಿದೆ ಎಂಬುದು ನಿಜವೇ? ಒಂದು ವೇಳೆ ಅದು ನಿಜವೇ ಆಗಿದ್ದಲ್ಲಿ ರೈಲ್ವೆ ಖಾಸಗೀಕರಣದ ನಂತರ ಅದರ ನಿರ್ವಹಣೆ ಹಾಗೂ ಪ್ರಯಾಣ ಶುಲ್ಕವನ್ನು ಹೇಗೆ ನಿರ್ವಹಿಸಲಿದೆ? ಎಂದು ಪ್ರಶ್ನಿಸಿದ್ದರು.