ಔರಂಗಾಬಾದ್: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿರುವ ಗ್ರಾಮವೊಂದರ ಜನರು ತಮ್ಮನ್ನು ತಾವು ಶ್ರೀಕೃಷ್ಣನ ವಂಶಸ್ಥರು ಎಂದು ಕರೆದುಕೊಳ್ಳುತ್ತಾರೆ ಮತ್ತು ಅವರಿ ಹಾಲು ಮಾರಾಟ ಮಾಡುವುದಿಲ್ಲ ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ವಿತರಣೆ ಮಾಡುತ್ತಾರಂತೆ. ಮಹಾರಾಷ್ಟ್ರದ ಹಲವು ರೈತರು ಹಾಗೂ ರಾಜಕೀಯ ನಾಯಕರು ಇದೆ ತಿಂಗಳು ಹಾಲಿನ ದರ ಏರಿಕೆ ಮಾಡಲು ಒತ್ತಾಯಿಸಿ, ರಸ್ತೆಗಳ ಮೇಲೆ ಹಾಲು ಸುರಿದು ಪ್ರತಿಭಟನೆ ನಡೆಸಿದ್ದರು. ಇನ್ನೊಂದೆಡೆ ಇದಕ್ಕೆ ವಿಪರೀತ ಎಂಬಂತೆ ಹಿಂಗೋಲಿ ಜಿಲ್ಲೆಯ ಯೆಲೆಗಾಂವ್ ಗವಳಿ ಗ್ರಾಮಸ್ತರು ಇದುವರೆಗೆ ಹಾಲನ್ನೇ ಮಾರಾಟ ಮಾಡಿಲ್ಲ. ವಿಶೇಷವೆಂದರೆ ಈ ಗ್ರಾಮದ ಪ್ರತಿ ಮನೆಯಲ್ಲಿಯೂ ಕೂಡ ಹೈನು ನೀಡುವ ದನಗಳಿವೆ.
ಈ ಕುರಿತು ಹೇಳಿಕೆ ನೀಡುವ ಗ್ರಾಮಸ್ಥ ರಾಜಾಭಾವು ಮಂದಾಡೆ(60), "ಎಲೆಗಾಂವ್ ಗವಳಿ ಅರ್ಥವೇ ಹೈನು ಉತ್ಪಾದಕರ ಊರು ಎಂದರ್ಥ. ನಾವು ನಮ್ಮನ್ನು ಶ್ರೀಕೃಷ್ಣನ ವಂಶಸ್ಥರೆಂದು ಭಾವಿಸುತ್ತೇವೆ" ಎಂದು ಹೇಳುತ್ತಾರೆ. ಊರಿನಲ್ಲಿ ಕನಿಷ್ಠ ಅಂದರೆ ಶೇ.90 ರಷ್ಟು ಮನೆಗಳಲ್ಲಿ ಹಸುಗಳು, ಎಮ್ಮೆ ಹಾಗೂ ಮೇಕೆಗಳಿವೆ. ಹಾಗೂ ಹಾಲನ್ನು ಮಾರಾಟ ಮಾಡದೆ ಇರುವ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾದರೆ, ವಿಭಿನ್ನ ರೀತಿಯ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ, ಯಾರಿಗೂ ಸಹ ಇವುಗಳನ್ನು ಮಾರಾಟ ಮಾಡಲಾಗುವುದಿಲ್ಲ ಹಾಗೂ ಅವಶ್ಯಕತೆ ಇರುವವರಿಗೆ ಉಚಿತವಾಗಿ ಇವುಗಳನ್ನು ವಿತರಿಸಲಾಗುತ್ತದೆ.
"ಗ್ರಾಮದಲ್ಲಿ ಜನ್ಮಾಷ್ಟಮಿ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಶ್ರೀಕೃಷ್ಣನ ದೇವಸ್ಥಾನವೂ ಕೂಡ ಇದೆ. ಆದರೆ, ಕೊವಿಡ್-19 ಮಹಾಮಾರಿಯ ಕಾರಣ ಈ ಬಾರಿಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಹಾಲನ್ನು ಮಾರಾಟ ಮಾಡದೆ ಇರುವ ಪರಂಪರೆಯನ್ನು ಜಾತಿ-ಧರ್ಮವನ್ನು ಹೊರತುಪಡಿಸಿ ಪಾಲಿಸಲಾಗುತ್ತದೆ ಎಂದು ಗ್ರಾಮದ ಮುಖ್ಯಸ್ಥ ಶೇಖ್ ಕೌಸರ್ (44 ) ಹೇಳುತ್ತಾರೆ.