ನವದೆಹಲಿ: ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದಲಿತರ ಮನೆಯಲ್ಲಿ ಸೊಳ್ಳೆಗಳು ಕಚ್ಚಿದರೂ ಸಹ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿ ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿನ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್ ಹೊಸ ವಿವಾದದ ಹುಟ್ಟಿ ಹಾಕಿದ್ದಾರೆ.
ಉತ್ತರ ಪ್ರದೇಶದ ಮಂತ್ರಿ ಸುರೇಶ್ ರಾಣಾ ಅವರು ದಲಿತ ಕುಟುಂಬಕ್ಕೆ ಭೇಟಿ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಅನುಪಮಾ "ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮಂತ್ರಿಗಳು ರಾತ್ರಿ ಸೊಳ್ಳೆಗಳು ಕಚ್ಚಿದರೂ ಸಹ ದಲಿತರ ಮನೆಗೆ ಹಲವಾರು ಭೇಟಿ ನೀಡಿದ್ದಾರೆ "ಎಂದಿದ್ದಾರೆ
ಈ ಹಿಂದೆ ರಾಣಾ ದಲಿತರ ಮನೆಯಲ್ಲಿನ ಭೋಜನದ ಬಗ್ಗೆ ಮಾತನಾಡುತ್ತಾ "ಇಡೀ ಗ್ರಾಮ ದಲಿತರಿಂದ ಕೂಡಿದೆ, ಈ ಸಂದರ್ಭದಲ್ಲಿ ನಾನು ಅವರಿಂದ ಹೆಚ್ಚು ಅತಿಥ್ಯವನ್ನು ಪಡೆದಿದ್ದೆ ಎಲ್ಲದಕ್ಕಿಂತ ಹೆಚ್ಚಾಗಿ ಊಟವನ್ನು ಹಳ್ಳಿಯಲ್ಲಿಯೇ ತಯಾರಿಸಲಾಗುತ್ತಿತ್ತು " ಎಂದು ಸಚಿವರು ಎಎನ್ಐ ಗೆ ತಿಳಿಸಿದರು.
ಮಂಗಳವಾರ ಸಚಿವ ರಾಣಾವರು ದಲಿತ ಮನೆಯೊಂದರಲ್ಲಿ ಭೋಜನವನ್ನು ಮಾಡುವುದಕ್ಕಿಂತ ಮೊದಲು ಬಗೆಬಗೆಯ ತಿಂಡಿ ತಿನಿಸುಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದವನ್ನು ಸೃಷ್ಟಿಸಿದ್ದವು.
ಈಗ ಈ ಘಟನೆಯ ನಂತರ ಶಿಕ್ಷಣ ಸಚಿವೆ ಅನುಪಮಾ ಜೈಸ್ವಾಲ್ ದಲಿತರ ಮನೆಯಲ್ಲಿ ಸೊಳ್ಳೆ ಕಚ್ಚಿದರೂ ಸಹಿತ ಕಾರ್ಯಕ್ರಮದ ಅನುಷ್ಠಾನದ ಸಮರ್ಪಕತೆ ಬಗ್ಗೆ ಹಲವಾರು ಭಾರಿ ದಲಿತರ ಮನೆಗೆ ಭೇಟಿ ನೀಡಲಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ಇದಕ್ಕೆ ಉತ್ತರ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.