ಬೆಂಗಳೂರು: ರೈತರಿಗೆ ಕಳಪೆ ಬೀಜ ಅಥವಾ ರಸಗೊಬ್ಬರ ವಿತರಿಸುವ ಕುಕೃತ್ಯಕ್ಕೆ ಯಾರೂ ಕೈ ಹಾಕದಂತೆ ಸ್ಟೇಟ್ ಅಗ್ರಿಕಲ್ಚರ್ ವಿಸಿಲೈನ್ಸ್ ಕಮಿಟಿ (ರಾಜ್ಯ ಕೃಷಿ ವಿಚಕ್ಷಣ ಸಮಿತಿ)ದಿಟ್ಟ ಕ್ರಮಕೈಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್, ಗೊಬ್ಬರ ದಾಸ್ತಾನು ಇದ್ದರೂ ಕೆಲವೆಡೆ 'ನೋ ಸ್ಟಾಕ್' ಎಂಬ ಬೋರ್ಡ್ ಇರುವುದು ತಮ್ಮ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ದುರ್ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರನ್ನು ಶೋಷಣೆ ಮಾಡಿದ್ದು ಕಂಡುಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕ್ರಮಜರುಗಿಸದೇ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹಣ್ಣು-ತರಕಾರಿಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಪರಿಶೀಲನೆ: ಕೃಷಿ ಸಚಿವ ಬಿ.ಸಿ. ಪಾಟೀಲ್
ಕೃಷಿ ವಿಚಕ್ಷಣ ಸಮಿತಿ ಈ ಬಗ್ಗೆ ನಿಗಾ ವಹಿಸಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಿದೆ. ಇದಕ್ಕೆ ಆಯಾ ಭಾಗದ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರನ್ನು ಹೊಣೆ ಮಾಡಲಾಗುವುದು. ಈತನಕ 375 ಕಡೆ ಸಮಿತಿ ದಾಳಿ ನಡೆಸಿದ್ದು, 170 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 6 ಕೋಟಿ ರೂ. ಮೌಲ್ಯದ ಕಳಪೆ ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ. ಇಂಥವರ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಷ್ಟಪಟ್ಟು ಬೆವರು ಸುರಿಸಿ ರೈತ (Farmers) ಬಿತ್ತನೆ ಮಾಡಿ ಬೆಳೆಬಾರದೇ ಇದ್ದರೆ ರೈತನ ಮನಸಿಗಾಗುವ ನೋವು ಹೇಳತೀರದು. ದೇಶಕ್ಕೆ ಅನ್ನಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ನೋವಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ. ಹೀಗಾಗಿ ರೈತರಿಗೆ ಯಾವುದೇ ಕಾರಣಕ್ಕೂ ಕಳಪೆಬೀಜ ಕಳಪೆ ರಸಗೊಬ್ಬರವನ್ನು ಯಾರೂ ವಿತರಿಸಬಾರದು. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಒಂದು ವೇಳೆ ಇಂತಹದ್ದೇನಾದರೂ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಮಳೆಗೆ ನಷ್ಟವಾದ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಆತ್ಮಸ್ಥೈರ್ಯ ತುಂಬಿದ ಕೃಷಿ ಸಚಿವ ಬಿ.ಸಿ. ಪಾಟೀಲ್
ಬೆಂಗಳೂರು ಮತ್ತು ಸುತ್ತಮುತ್ತ ತರಕಾರಿ, ಹೂವು ಬೆಳೆದ ಬೆಳೆಗಾರರಿಗೆ ಸರಬರಾಜು ಮತ್ತು ಮಾರಾಟದಲ್ಲಿ ಸ್ವಲ್ಪ ತೊಂದರೆ, ವ್ಯತ್ಯಯವಾಗಿದೆ. ಶೇ.40ರಷ್ಟು ಹೂವು, ತರಕಾರಿ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ನಷ್ಟ ಹೇಗೆ ಭರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದರು. ಪಾಲಿ ಹೌಸ್ ಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆಯೂ ಸಹ ಗಂಭೀರವಾಗಿ ಚಿಂತನೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಲಾಕ್ಡೌನ್ ಅವಧಿಯಲ್ಲಿ ರೈತರ ಓಡಾಟಕ್ಕೆ ಗ್ರೀನ್ ಪಾಸ್ ಬಿಡುಗಡೆ: ಕೃಷಿ ಸಚಿವ ಬಿ.ಸಿ. ಪಾಟೀಲ್
ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ಲಾಕ್ಡೌನ್ (Lockdown)ನಿಂದ ಈವರೆಗೆ ಹೂಬೆಳೆದ ರೈತರಿಗೆ ಸುಮಾರು 250 ಕೋಟಿ ರೂ. ನಷ್ಟವಾಗಿದೆ. ರೈತರು ಬೆಳೆದ ಹೂ ಮಾರಲು ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಮಾರುಕಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.