ಬೆಂಗಳೂರು: ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಗುರುವಾರ ಇಲ್ಲಿನ ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಹಣವಾಳ, ಸಿಂಗನಾಳ, ಸಿಂಗನಾಳ ಕ್ಯಾಂಪ್, ಜಿರಾಳ ಕಲ್ಲಗುಡಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿದರಲ್ಲದೆ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
ಬೆಳೆ ನಷ್ಟದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಆದಷ್ಟು ಬೇಗ ಬೆಳೆ ನಷ್ಟ ಸಮೀಕ್ಷೆ ಮಾಡಲಾಗುವುದು. ಬೆಳೆ ನಷ್ಟದಿಂದ ಯಾವುದೇ ರೈತರು ಆತಂಕಕ್ಕೊಳಗಾಗುವುದು ಬೇಡ. ಪ್ರಕೃತಿ ವಿಕೋಪಗಳಾದಾಗ ಧೈರ್ಯದಿಂದ ಇರಬೇಕು. ಸರ್ಕಾರ ರೈತರ ಜೊತೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ದಡೆಸೂಗೂರು ಬಸವರಾಜ್, ಪರಣ್ಣ ಮುನವಳ್ಳಿ,ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಸೇರಿದಂತೆ ಕೃಷಿ ತೋಟಗಾರಿಕಾ ಅಧಿಕಾರಿಗಳು ಜೊತೆಗಿದ್ದರು. ಇದಕ್ಕೂ ಮುನ್ನ ದಾರಿ ಮಧ್ಯದಲ್ಲಿ ಒಂದಿಷ್ಟು ರೈತರನ್ನು ಭೇಟಿಯಾದರು. ಕೊಪ್ಪಳ ಜಿಲ್ಲೆಯ ಮೆಟ್ರಿ ಗ್ರಾಮದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿ, ಯಾವುದೇ ಆತಂಕವಿಲ್ಲದೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಎಂದು ಸೂಚಿಸಿದರು.