ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರ ಇದ್ದಾಗ ಸದಾ ಬೆನ್ನಿಗಿದ್ದ ನಾಯಕರು ಇತ್ತೀಚಿಗೆ ಕಣ್ಮರೆಯಾಗಿದ್ದಾರೆ. ಯಡಿಯೂರಪ್ಪ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಪ್ರಾರಂಭಿಸಿದ್ದರೂ ಆ ನಾಯಕರ ಸದ್ದಿಲ್ಲ. ಅಷ್ಟೇ ಅಲ್ಲದೆ, ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಎಸ್ವೈ ಧ್ವನಿ ಎತ್ತಿದಾಗಲೂ ಅವರ ಬೆಂಬಲಿಗರು ಮಾಧ್ಯಮಗಳ ಮುಂದೆ ಬರಲಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸದಾ ತಾವೇ ಮುಂದೆ ನಿಲ್ಲುತ್ತಿದ್ದ ನಾಯಕರು ಈಗ ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ.
ಮಾಜಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಸಿ.ಎಂ. ಉದಾಸಿ, ಲಕ್ಷ್ಮಣ್ ಸವಧಿ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ, ಎಸ್.ಕೆ. ಬೆಳ್ಳುಬ್ಬಿ, ಕೃಷ್ಣಯ್ಯ ಶೆಟ್ಟಿ, ರೇವುನಾಯಕ್ ಬೆಳಮಗಿ, ಬಿ.ಎನ್. ಬಚ್ಚೇಗೌಡ, ಎಸ್.ಆರ್.ರವೀಂದ್ರನಾಥ್, ಕೃಷ್ಣ ಪಾಲೇಮಾರ್, ಸಿ.ಸಿ ಪಾಟೀಲ್, ರೇಣುಕಾಚಾರ್ಯ, ಹರಿಹರದ ಮಾಜಿ ಶಾಸಕ ಹರೀಶ್ ಸೇರಿದಂತೆ ಯಾರೂ ಎಲ್ಲಿಯೂ ಮುಂದೆ ಬರುತ್ತಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಹೊರತು ಪಡಿಸಿ ಬಿಎಸ್ವೈ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಎಲ್ಲರೂ ಸುಮ್ಮನಿರುವುದಾದರೂ ಏಕೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಬೆಂಬಲಿಗರ ಗಪ್ ಚುಪ್ ಗೆ ಏನಾದರೂ ಕಾರಣ ಇರಲೇ ಬೇಕಲ್ಲವೇ...? ಹೌದು ಇಲ್ಲಿದೆ ಕೆಲವು ಕಾರಣಗಳು...
* ಬಿ.ಎಸ್.ಯಡಿಯೂರಪ್ಪ ಬೆಂಬಲಿಗರಿಗೆ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಷಾ, ಮೋದಿ ಭಯ.
* ಪಕ್ಷದಲ್ಲಿ ಬಿ.ಎಸ್.ವೈ ಬೆಂಬಲಿಗರ ವಿರುದ್ಧದ ಇರುವ ಆಕ್ರೋಶ ಬೂದಿ ಮುಚ್ಚಿದ ಕೆಂಡ.
* ಮಾಧ್ಯಮಗಳ ಮುಂದೆ ಬಂದರೆ ಇತರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ.
* ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಮುಖ್ಯವಾಹಿನಿಯ ಉಸಾಬರಿ ಬೇಡ ಎಂಬ ನಿಲುವೂ ಇರಬಹುದು.
* ಪಕ್ಷದ ಸಂಪೂರ್ಣ ಜುಟ್ಟು ಹೈಕಮಾಂಡ್ ಕೈಲಿರುವ ಹಿನ್ನೆಲೆ.
* ಕೇಂದ್ರ ಸಚಿವರುಗಳೇ ಸ್ವಯಂಪ್ರೇರಿತವಾಗಿ ಮಾತನಾಡದಿರುವಾಗ ನಮಗ್ಯಾಕೆ ಎಂಬ ನಿಲುವು.
* ರಾಜಕೀಯ ಪರಿಸ್ಥಿತಿಯ ಅವಲೋಕನದಲ್ಲಿರುವ ಬಿ.ಎಸ್.ವೈ ಬೆಂಬಲಿಗರು.
* ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಬೆನ್ನಿಗೆ ನಿಲ್ಲದ ಹಲವು ನಾಯಕರು ಈಗ ಮೌನಕ್ಕೆ ಶರಣು.
* ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು, ಈ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ನಾಯಕರು.
* ಯಡಿಯೂರಪ್ಪ, ಈಶ್ವರಪ್ಪ ಕಿತ್ತಾಟದಲ್ಲಿ ಬಿಸಿ ಮುಟ್ಟಿಸಿರುವ ಅಮಿತ್ ಷಾ ನಡೆ.
ಈ ಎಲ್ಲಾ ಕಾರಣಗಳೂ ಬಿಜೆಪಿಯಲ್ಲಿ ಬಿಎಸ್ವೈ ಬೆಂಬಲಿಗರು ಸುಮ್ಮನಿರಲು ಕಾರಣವಾಗಿದೆ. ಇವರುಗಳ ಈ ನಿಲುವಿನಿಂದ ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಯಾರಿಗೂ ತಿಳಿಯದ ವಿಷಯ. ಪ್ರಚಾರದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲದವರನ್ನು ಅಧಿಕಾರ ಬಂದ ನಂತರ ಬಿಎಸ್ವೈ ಹತ್ತಿರಕ್ಕೆ ತೆಗೆದುಕೊಳ್ಳುವರೇ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.