Tender Coconut Price Hike: ಅಬ್ಬಾ... ಇವತ್ತು ತೆಂಗಿನ ಕಾಯಿಗೆ ಇನ್ನಿಲ್ಲದ ಡಿಮಾಂಡ್ ಬಂದಿದೆ. ಎಷ್ಟು ಬೇಕಾದರೂ ದುಡ್ಡು ಕೊಡುತ್ತೇವೆ ಎಂದರೂ ಒಳ್ಳೆ ಕಾಯಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಒಂದು ಸಾಧಾರಣ ತೆಂಗಿನ ಕಾಯಿಗೆ 50 ರೂಪಾಯಿ ಇದೆ. ಹಣ ಕೊಡುತ್ತೇನೆಂದರೂ ಕಾಯಿ ಇಲ್ಲದಂತಹ ಪರಿಸ್ಥಿತಿ ಬಂದಿದ್ದಾರೂ ಏಕೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಮಡಿಕೇರಿ, ಕೊಡಗು ಭಾಗಗಳಲ್ಲಿ ಪ್ರತಿ ಮನೆಯಲ್ಲಿ ತೆಂಗಿನಕಾಯಿ ಇಲ್ಲದೇ ಅಡಿಗೆ ಮಾಡೋದೇ ಇಲ್ಲ. ಆ ಭಾಗದ ಜನರಿಗೆ ತೆಂಗಿನಕಾಯಿ ಒಂದು ಸಮಸ್ಯೆಯಾಗಿದೆ. ಉತ್ತಮ ತೆಂಗಿನ ಕಾಯಿಗಳು ಮಾರುಕಟ್ಟೆಯಲ್ಲಿಲ್ಲ. 400-500 ಗ್ರಾಂ ತೂಗುವ ತೆಂಗಿನ ಕಾಯಿ ಮಂಗಮಾಯವಾಗಿದೆ. ಈಗ ಒಂದು ಕೆಜಿಗೆ ಮೂರು, ನಾಲ್ಕು ಬರುವ ಕಾಯಿಗಳ ಬೆಲೆಯೇ ಗಗನಕ್ಕೆ ಹೋಗಿದೆ.
ಮನೆಯಲ್ಲಿ, ಹೋಟೆಲ್ಗಳಲ್ಲಿ, ದೇವಾಲಯಗಳಲ್ಲಿ ತೆಂಗಿನ ಕಾಯಿ ಎಂದರೆ ಬೆಚ್ಚಿ ಬೀಳುವಂತಾಗಿದೆ. ಕಾಯಿ ಕಥೆ ಇದಾದರೆ, ಇನ್ನೂ ಉತ್ತಮ ಎಳನೀರಿಗೆ 60-70 ರೂ. ಕೇಳುತ್ತಿದ್ದಾರೆ ಮಾರಾಟಗಾರರು. ಹಿಡಿ ಗಾತ್ರದ ಎಳನೀರು 50-60 ರೂ.ವರೆಗೆ ಹೇಳುತ್ತಾರೆ. ಇದ್ದಕ್ಕಿದ್ದಂತೆ ತೆಂಗಿಗೆ ಈಗ ಶುಕ್ರ ದೆಸೆ ಬಂದಿದೆ. ಇನ್ನೂ ಐದಾರು ತಿಂಗಳು ಇದೇ ಸ್ಥಿತಿ ಇರಲಿದೆ ಅಂತಾರೆ ಮಾರುಕಟ್ಟೆ ವಿಶ್ಲೇಷಕರು. ಆದರೆ ಈ ಬೆಳವಣಿಗೆಯಿಂದ ಖುಷಿಯಾಗಿರಬೇಕಾದ ನಮ್ಮ ಭಾಗದ ತೆಂಗು ಬೆಳೆಗಾರ ಇನ್ನೂ ಸಪ್ಪೆ ಮುಖ ಹಾಕಿ ಕುಳಿತಿದ್ದಾರೆ. ತೆಂಗಿನ ಕಾಯಿ, ಎಳನೀರು ಬೆಲೆ ಗಗನದಲ್ಲಿದ್ದರೂ ಅವನ ಮುಖದಲ್ಲಿ ಮಾತ್ರ ಕಳೆಯೇ ಇಲ್ಲವಾಗಿದೆ. ಕಾರಣ ಕೊಬ್ಬರಿ ಬೆಲೆ ಬಿದ್ದೋಗಿದೆ ಅನ್ನೋದೇ ಆತಂಕದಲ್ಲಿ ಅವರ ದೃಷ್ಟಿ ಬೇರೆ ಕಡೆ ಹೋಗಿಲ್ಲ.
ಇಂದಿನ ಕೊಬ್ಬರಿ ಬೆಲೆ ನೂರು ಕೆಜಿಗೆ 14.350-14,500 ರೂ. ನಡುವೆ ಇದೆ. ತೆಂಗಿನ ಕಾಯಿಗೆ ಲೆಕ್ಕ ಹಾಕಿದರೆ ಕೊಬ್ಬರಿ ಬೆಲೆ ವೈಜ್ಞಾನಿಕವಾಗಿ ಪಾತಾಳಕ್ಕಿದೆ. ಕಾಯಿ ಬೆಲೆಗೆ ಹೋಲಿಕೆ ಮಾಡಿದರೆ, ಅಂದಾಜು 25,000 ರೂ. ಇರಬೇಕಿತ್ತು. ಉದಾಹರಣೆಗೆ ಒಂದು ಕೆಜಿಗೆ ಕೊಬ್ಬರಿಗೆ ಐದಾರು ಗಿಟುಕು ಬರುತ್ತೆ. ಬೆಲೆಯ ಲೆಕ್ಕದಲ್ಲಿ ಕೊಬ್ಬರಿ ಒಂದಕ್ಕೆ 30 ರೂ. ಸಿಗುತ್ತದೆ. ಆದರೆ ಒಂದು ಕಾಯಿಗೆ 40-50 ರೂ. ಬೆಲೆ ಇದೆ. ತೆಂಗಿನ ಕಾಯಿ ಬೆಲೆಗೆ ಲೆಕ್ಕ ಹಾಕಿದರೆ ಐದು ಕಾಯಿಗೆ 250 ರೂ. ಸಿಗುವ ಜೊತೆಗೆ ಒಂದು ವರ್ಷ ಸಮಯ ಉಳಿಯುತ್ತದೆ. ಅದೇ ಎಳನೀರಿಗೆ ಲೆಕ್ಕ ಹಾಕಿದರೆ ರೈತರ ತೋಟದಲ್ಲೇ ಒಂದು ಎಳನೀರು 30-35 ರೂ.ಗೆ ಕೀಳುತ್ತಿದ್ದಾರೆ. ಕಾಯಿಗಿಂತ ಮೊದಲೇ ಬರುವ ಒಂದು ಎಳನೀರಿಗೆ 35 ರೂ.ನಂತೆ 5 ಎಳನೀರಿನ ಬೆಲೆ 165 ರೂ. ಸಿಗುತ್ತದೆ. ಸಮಯ, ಶ್ರಮ ಉಳಿಯುವ ಜೊತೆಗೆ ತಜ್ಞರ ಪ್ರಕಾರ, ಮರದಲ್ಲಿ ಇಳುವರಿ ಹೆಚ್ಚುತ್ತದೆ. ಲೆಕ್ಕಾಚಾರ ಮಾಡಿ, ಚರ್ಚಿಸಿ, ಚಿಂತನೆ ಮಾಡಿ, ಇಲ್ಲಿ ಯಾರದು ತಪ್ಪಿದೆ ಅಂತಾ?
ಕಲ್ಪವೃಕ್ಷವಾಗಲಿಲ್ಲವೇ ತೆಂಗು..?
ತೆಂಗು ಕಲ್ಪವೃಕ್ಷ ಹೆಸರಿಗೆ ಮಾತ್ರ. ಬಹುಪಯೋಗಿ ತೆಂಗು ಲಾಭದಾಯಕವಲ್ಲವೆಂಬ ಆರೋಪ ಒಂದು ಕಡೆಯಾದರೆ, ಅದೊಂದು ಸೋಮಾರಿ ಬೆಳೆ ಎನ್ನುವ ಅಸಮಾಧಾನದ ಮಾತುಗಳು ರೈತರ ಬಾಯಿಂದ ಕೇಳಿದ್ದೇವೆ. ಏಕೆಂದರೆ ತೆಂಗು ಬೆಳೆದ ಬೆಳೆಗಾರ ಸದಾ ಸಮಸ್ಯೆಗಳೊಳಗೆ ಸುತ್ತುತ್ತಾ ಇರುತ್ತಾರೆ. ಅದರಲ್ಲೂ ಈ ಭಾಗದ ತೆಂಗು ಬೆಳೆಗಾರನಿಗೆ ಸಮಸ್ಯೆಗಳು ಹಾಸು ಹೊದ್ದು ಮಲಗಿದೆಯಂತೆ. ಕಳೆದ ಎರಡು ವರ್ಷಗಳ ಕಾಲ 8,100-11,000 ರೂ. ಒಳಗೆ ಇದ್ದ ಕೊಬ್ಬರಿ ಧಾರಣೆಯು 2024ರ ಸೆಪ್ಟೆಂಬರ್ನಲ್ಲಿ ಏರುತ್ತಾ ಈಗ 14,000-15,000 ನಡುವೆ ಗಿರಿಕಿ ಹೊಡೆಯುತ್ತಿದೆ. ವರ್ಷಕ್ಕೊಮ್ಮೆ ದುಡ್ಡು ನೋಡುವ ನಮ್ಮ ತೆಂಗು ಬೆಳೆಗಾರನಿಗೆ ನ್ಯಾಯವಾದ ಬೆಲೆ ಸಿಗದೇ ಇದ್ದರೆ ಮುಗಿತು ಸಾಲದ ಶೂಲಕ್ಕೆ ಸಿಲುಕಿದಂತೆಯೇ. ಇದರಿಂದ ಈಚೆಗೆ ತೆಂಗಿನ ಬೆಳೆಗಿಂತ ಅಡಿಕೆ ಬೆಳೆ ಕಡೆ ರೈತರು ಹೆಚ್ಚು ಒಲವು ತೋರುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ: ರೈತರಿಗೆ ಸಂತಸದ ಸುದ್ದಿ.. ನೇರವಾಗಿ ನಿಮ್ಮ ಖಾತೆಗೆ ಬರಲಿದೆ 27 ಸಾವಿರ ರೂಪಾಯಿ!
ತೆಂಗಿನ ಕಾಯಿ ಬೆಲೆ ಗಗನಕ್ಕೆ!
ಈಗ ತೆಂಗಿನಕಾಯಿಗೆ ದಾಖಲೆ ದರ. ಪ್ರತಿ ಕಿಲೋಗೆ 70 ರೂ. ಸಗಟು ದರ ಇದ್ದರೆ, ರಿಟೇಲ್ 100 ರೂ.ಗೂ ಹೆಚ್ವಿದೆ. ಮಾರುಕಟ್ಟೆಯಲ್ಲಿ ಇಂದು ತೆಂಗಿನ ಕಾಯಿ ಬೆಲೆ ಕೇಳಿದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ತೆಂಗಿನ ರುಚಿಗೆ ಪರ್ಯಾಯ ಇಲ್ಲ, ಅಡುಗೆಗೆ ಬೇಕೇ ಬೇಕು, ಪೂಜೆಗೂ ಬೇಕು. ಕಳೆದ ಎರಡ್ಮೂರು ತಿಂಗಳ ಹಿಂದೆ ಪ್ರತಿ ಕೆಜಿಗೆ 45-55 ರೂ. ಇದ್ದ ತೆಂಗಿನಕಾಯಿ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಏಪ್ರಿಲ್-ಮೇ ವೇಳೆಗೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಇಂದು ಅರಸೀಕೆರೆಯ ಮಾರುಕಟ್ಟೆಯಲ್ಲಿ ತೆಂಗಿನ ಬೆಲೆ ನಿಯಂತ್ರಣ ಕಳೆದುಕೊಂಡು ಏರುತ್ತಿರುವ ಹೊತ್ತಲ್ಲಿ ಬೇಡಿಕೆಯೂ ಹೆಚ್ಚಿದೆ. ತೆಂಗಿನಕಾಯಿಯ ಬೆಲೆ ದಾಖಲೆ ಬರೆದಿದೆ. ಇದರಿಂದ ತೆಂಗಿನಕಾಯಿ ದರ ಕೇಳುತ್ತಿದ್ದಂತೆಯೇ ಗ್ರಾಹಕರು ಹೌಹಾರುವಂತಾಗಿದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಉತ್ತಮ ಬೆಲೆ ಕಂಡಿದ್ದ ತೆಂಗಿನಕಾಯಿ ಇದೀಗ ಹೊಸ ವರ್ಷದ ಆರಂಭದಲ್ಲಿ ಮತ್ತಷ್ಟು ಏರಿಕೆಗತಿಯಲ್ಲೇ ಸಾಗುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಪ್ರತಿ ಕಿಲೋ 50 ರಿಂದ 52 ರೂ.ವರೆವಿಗೂ ತಲುಪಿದ್ದ ತೆಂಗಿನಕಾಯಿ ದರ, ಬಳಿಕ ತಿಂಗಳೊಳಗೆ 40 ರೂ.ಗೆ ಕುಸಿದಿತ್ತು. ಬಳಿಕ ಮತ್ತೆ ಚೇತರಿಸಿಕೊಂಡು ಏರಿಕೆ ಕಾಣುತ್ತಾ 70-80 ರೂ. ತಲುಪಿದೆ. ಇತ್ತೀಚಿನ ವರ್ಷಗಳಲ್ಲೇ ತೆಂಗಿನಕಾಯಿಗೆ ದೊರೆಯುತ್ತಿರುವ ಉತ್ತಮ ಧಾರಣೆ ಇದಾಗಿದೆ. ಸಾಧಾರಣ ಗಾತ್ರದ ಒಂದು ತೆಂಗಿನಕಾಯಿಗೆ ವ್ಯಾಪಾರಿಗಳು 40-50 ರೂ. ಬೆಲೆ ಹೇಳುತ್ತಿದ್ದಾರೆ. ತಿಂಗಳ ಹಿಂದೆ 15 ರೂ.ಗೆ ದೊರೆಯುತ್ತಿದ್ದ ಸಣ್ಣ ಗಾತ್ರದ ತೆಂಗಿನಕಾಯಿಗೆ ಈಗ 30-40 ರೂ.ಗಳಾಗಿದೆ. ಮಧ್ಯಮ ಗಾತ್ರದ ತೆಂಗಿನ ಕಾಯಿಗೆ 50 ರೂ. ಇದ್ದರೆ, ದಪ್ಪ ತೆಂಗಿಗೆ 60 ರೂ.ಗಳಾಗಿದೆ.
ಬೆಲೆ ಹೆಚ್ಚಳಕ್ಕೆ ಕಾರಣಗಳೇನು?
ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನ ಮರದಲ್ಲಿನ ಎಳನೀರು, ತೆಂಗಿನ ಕಾಯಿ ಮತ್ತು ತೆಂಗಿನ ಕಾಯಿ ಒಣ ಪುಡಿ ಈ ಮೂರಕ್ಕೂ ಅದೃಷ್ಟ ಖುಲಾಯಿಸಿದೆ. ದಿನೇ ದಿನೇ ಧಾರಣೆ ಹೆಚ್ಚುತ್ತಿದೆ. ಕಳೆದ ಒಂದೆರಡು ವರ್ಷದಿಂದಲೂ ಎಳನೀರಿಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಉತ್ತರ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಹೆಚ್ಚಿನ ಬೆಲೆ ಸಿಗುತ್ತದೆ, ತಕ್ಷಣ ಹಣ ಕೈಗೆ ಬರುತ್ತದೆ ಮತ್ತು ಸಮಯ ಉಳಿಯುತ್ತದೆ ಎನ್ನುವ ಕಾರಣಕ್ಕೆ ಈಚೆಗೆ ರೈತರು ಎಳನೀರು ಮಾರಲು ಶುರು ಮಾಡಿದ ಕಾರಣ ತೆಂಗಿನ ಕಾಯಿಯ ಕೊರತೆ ಹೆಚ್ಚಿದೆ. ಮಂಡ್ಯ ಜಿಲ್ಲೆಯ ಚನ್ನಪಟ್ಟಣ, ಮದ್ದೂರು, ನಾಗಮಂಗಲ, ಕೆ.ಅರ್.ಪಟ್ಟಣ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ಭಾಗದಿಂದ ದೆಹಲಿ, ಗೋವಾ, ಮುಂಬಯಿ ಸೇರಿದಂತೆ ಹೊರ ರಾಜ್ಯಗಳಿಗೆ ನಿತ್ಯ ಲೋಡ್ಗಟ್ಟಲೆ ಎಳನೀರು ನಿರಂತರವಾಗಿ ಪೂರೈಕೆಯಾಗುತ್ತಿದೆ. ಮದ್ದೂರು ಪಟ್ಟಣದ ಎಪಿಎಂಸಿ ಎಳನೀರಿನ ಮಾರುಕಟ್ಟೆ ದೇಶದಲ್ಲೇ ಹೆಸರಾಗಿದೆ. ಜೊತೆಗೆ ಇಳುವರಿ ಕಡಿಮೆಯಾದ ಕಾರಣ ತೆಂಗಿನಕಾಯಿಗೆ ಹೆಸರಾದ ಈ ಮಾರುಕಟ್ಟೆಯಲ್ಲಿ ಈಗ ಸರಬರಾಜು ಕೊರತೆ ಕಾಣುತ್ತಿದೆ. ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ತೆಂಗಿನ ಇಳುವರಿ ಕಡಿಮೆಯಾಗಿದ್ದು, ಆ ಭಾಗದ ತೆಂಗಿನ ಎಣ್ಣೆ ಉತ್ಪಾದಕರು ತೆಂಗಿನ ಕಾಯಿಗಾಗಿ ಕರ್ನಾಟಕದ ನಾನಾ ಭಾಗಗಳಲ್ಲಿ ಹುಡುಕಾಟ ನಡೆಸಿ, ಖರೀದಿಸುತ್ತಿರುವುದು ಮತ್ತೊಂದು ಕಾರಣವಾಗಿದೆ.
ಕೊಬ್ಬರಿ ಬೆಳೆಗಾರರಿಗೆ ನಷ್ಟ ಏಕೆ?
ಮೂಲ ತೆಂಗು ಬೆಳೆಗಾರ ಸಾಂಪ್ರಾದಾಯಿಕವಾಗಿ ಕೊಬ್ಬರಿ ಮಾಡಿ, ಮಾರಾಟ ಮಾಡುವ ಮೂಲಕ ಕೊಬ್ಬರಿ ಬೆಳೆಗಾರ ಎನ್ನುವ ಪ್ರತಿಷ್ಠೆಗಳಿಸಿದ್ದ. ಎಳನೀರು, ಕಾಯಿ ಮಾರುವುದು ಘನತೆ, ಗೌರವಕ್ಕೆ ಧಕ್ಕೆ ಬರುತ್ತದೆ. ಮನೆತನದ ಮಾನ ಹೋಗುತ್ತದೆ ಎನ್ನುವ ಸಂಪ್ರಾದಾಯ ಕೃಷಿಗೆ ಒಪ್ಪಿಕೊಂಡ ಸಾವಿರಾರು ರೈತ ಕುಟುಂಬಗಳು ಇಂದಿಗೂ ಕೊಬ್ಬರಿ ಬಿಟ್ಟು ಬೇರೆ ಆಲೋಚನೆ ಮಾಡುತ್ತಿಲ್ಲ. ಹೀಗಾಗಿ ಎಳನೀರು, ಕಾಯಿ ಮಾರಾಟ ಮಾಡುವುದನ್ನು ಈಗಲೂ ವಿರೋಧಿಸುತ್ತಾರೆ, ಉಳಿದವರು ಅದನ್ನೇ ಅನುಸರಿಸುತ್ತಾರೆ. ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ಕೊಡಿ ಎಂದು ಸದಾ ಹೋರಾಟದಲ್ಲೇ ಸನ್ನದ್ಧರಾಗಿರುವ ರೈತ ಮುಖಂಡರೂ ಸಹ ಈ ವಿಷಯದಲ್ಲಿ ಸ್ಪಷ್ಟತೆಗೆ ಬರದೇ ಗೊಂದಲದಲ್ಲಿದ್ದಾರೆ. ಹೀಗಾಗಿ ಎಳನೀರು, ಕಾಯಿ ಮಾರಾಟ ಮಾಡುವ ಮೈಸೂರು, ಹಾಸನ, ದಕ್ಷಿಣ ಕನ್ನಡ ಭಾಗದ ತೆಂಗು ಬೆಳೆಗಾರರಿಗಿಂತ ಈ ಭಾಗದ ರೈತರು ನಷ್ಟದಲ್ಲಿದ್ದಾರೆಂದು ದಾಖಲೆಗಳು ಹೇಳುತ್ತವೆ. ಹೊಸತನ ಮತ್ತು ಸುಧಾರಣೆಗೆ ಒಪ್ಪದ ಈ ಭಾಗದ ರೈತರು ಸದಾ ಸರ್ಕಾರದ ಬಾಗಿಲ ಬಳಿ ನಿಲ್ಲುವುದು ತಪ್ಪಿಲ್ಲ. ರೈತ ಮುಖಂಡರು, ಬೆಳೆಗಾರರು ಒಮ್ಮತದ ನಿರ್ಧಾರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಮಾತ್ರ ತೆಂಗು ಬೆಳೆಗಾರ ಉಳಿಯಲು ಸಾಧ್ಯ.
ಇದನ್ನೂ ಓದಿ: PM Kisan: 9.8 ಕೋಟಿ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಪಿಎಂ ಕಿಸಾನ್ ಯೋಜನೆಯ 19ನೇ ಕಂತು ಈ ದಿನ ಬಿಡುಗಡೆ!!
ಕೆಸಿಪಿಎಂಸಿಯ ಕಲ್ಪಸಿರಿ ಯೋಜನೆಯೂ ತೆಂಗು ಬೆಳೆಗಾರನಿಗೆ ಹೆಚ್ಚು ಆದಾಯ ಕೊಡುವುದೇ? ಹೌದು, ಎನ್ನುತ್ತದೆ ಸಂಸ್ಥೆ. 100 ತೆಂಗಿನ ಮರಗಳಿರುವ ಸಾಧಾರಣ ರೈತನ ಇಳುವರಿ ವರ್ಷಕ್ಕೆ ಸರಾಸರಿ 100 ಕಾಯಿಯಂತೆ ಲೆಕ್ಕದಲ್ಲಿ 10 ಸಾವಿರ ಕಾಯಿಗಳು ಎಂದುಕೊಳ್ಳೋಣ. ಆತ ಅಷ್ಟನ್ನು ಕೊಬ್ಬರಿಗೆ ಹಾಕಿದರೆ ಮುಂದಿನ ವರ್ಷಕ್ಕೆ ಎಲ್ಲಾ ನಷ್ಟ ಕಳೆದು 9 ಸಾವಿರ ಕೊಬ್ಬರಿ ಸಿಗುತ್ತದೆ. ಮಾರುಕಟ್ಟೆ ಮೋಸದಲ್ಲಿ 500 ಕಳೆದು 8,500 ಕೊಬ್ಬರಿ ಬರುತ್ತದೆ. ಅಂದರೆ 1,700 ಕೆ.ಜಿ. ಇಂದಿನ ಬೆಲೆಯಲ್ಲಿ 14,300 ರೂ.ನಂತೆ ವರ್ಷದ ಕೊನೆಯಲ್ಲಿ 2,38,000 ರೂ. ರೈತನ ಕೈ ಸೇರುತ್ತದೆ (ಫಲ ಬಿಟ್ಟು ಕೊಬ್ಬರಿಯಾಗಲು ಎರಡು ವರ್ಷಗಳು ಬೇಕು). ಕಲ್ಪತರುನಾಡು ತೆಂಗು ಉತ್ಪನ್ನಗಳು ಮತ್ತು ಮಾರಾಟ ಸಂಸ್ಥೆ (ಕೆಸಿಪಿಎಂಸಿ)ಯ ನೂತನ ಕಲ್ಪಸಿರಿ ಯೋಜನೆಯಿಂದ ತೆಂಗು ಬೆಳೆ ಅವನ ಅಭಿವೃದ್ಧಿಗೆ ವರದಾನವಾಗಲಿದೆ. ಕಂಪನಿಯ ಲೆಕ್ಕಾಚಾರದಲ್ಲಿ 100 ತೆಂಗಿನ ಮರಗಳಲ್ಲಿ 10 ತೆಂಗಿನ ಮರಗಳಲ್ಲಿ ನೀರಾ ಉತ್ಪನ್ನಕ್ಕೆ ಮೀಸಲಿಟ್ಟರೆ ಉಳಿದ 90 ಮರಗಳಿಂದ ವಾರ್ಷಿಕ ಸುಮಾರು 9,500 ತೆಂಗಿನ ಕಾಯಿಗಳ ದೊರೆಯುತ್ತದೆ. ಒಟ್ಟು ಇಳುವರಿಯನ್ನು ವಾರ್ಷಿಕವಾಗಿ ನೀರಾ ಹೊರತುಪಡಿಸಿ ಮೂರು ಭಾಗಗಳಾಗಿ ವಿಂಗಡಿಸಿ, 4,000 ತೆಂಗಿನ ಕಾಯಿ ಕೊಬ್ಬರಿಗೆ ಹಾಕಿದರೆ ವರ್ಷದ ನಂತರ 800 ಕೆಜಿಗೆ ಕೊಬ್ಬರಿ ಸಿಗುತ್ತದೆ.
ಕೆಜಿಗೆ 200 ರೂ.ನಂತೆ, 1,60,000 ರೂ. ರೈತನ ಕೈಗೆ ಸಿಗುತ್ತದೆ. ಮೊದಲ ನಾಲ್ಕು ತಿಂಗಳಲ್ಲಿ ಒಂದಕ್ಕೆ 30 ರೂ.ನಂತೆ 3 ಸಾವಿರ ಎಳನೀರು ಮಾರಾಟ ಮಾಡಿದರೆ 90 ಸಾವಿರ ಹಣ ರೈತನ ಪಾಲಾಗುತ್ತದೆ. ಮುಂದಿನ ನಾಲ್ಕು ತಿಂಗಳ ನಂತರ ಉಳಿದ 3 ಸಾವಿರ ತೆಂಗಿನ ಕಾಯಿಯನ್ನು 20 ರೂ.ನಂತೆ ಮಾರಾಟ ಮಾಡಿದರೆ 60,000 ಸಾವಿರ ರೂ. ರೈತನ ಜೇಬಿಗಳಿಯುತ್ತದೆ. ಜೊತೆಗೆ ಆರಂಭದಿಂದಲೂ 10 ತೆಂಗಿನ ಮರಗಳಿಂದ ನಿತ್ಯ 15 ಲೀಟರ್ ನೀರಾ ಉತ್ಪನ್ನದಿಂದ ವಾರ್ಷಿಕ 7,000 ಲೀಟರ್ ಉತ್ಪಾದನೆಯಾಗುತ್ತದೆ. ಅದರಿಂದ 3 ಲಕ್ಷ ರೂ. ಆದಾಯ ನಿರಾಯಾಸವಾಗಿ ರೈತನ ಕುಟುಂಬ ನಿರ್ವಹಣೆಗೆ ಸಿಗುತ್ತದೆ. ಇದರಿಂದ ರೈತ ಸಾಲದಿಂದ ಮುಕ್ತನಾಗುತ್ತಾನೆ. ಒಟ್ಟಾರೆ 100 ತೆಂಗಿನ ಮರ ಹೊಂದಿರುವ ಒಬ್ಬ ರೈತನ ವಾರ್ಷಿಕ ಆದಾಯ 6,10,000 ರೂ. ಆಗುತ್ತದೆ ಎಂದರೆ ಅಚ್ಚರಿ ಎನಿಸಬಹುದು. ಕೊಬ್ಬರಿ ಮಾರುವ ರೈತ ವರ್ತಕನ ಬಳಿ ಸಾಲ ಮಾಡಿ, ಬಡ್ಡಿ ಕಟ್ಟಿ, ತೂಕದ ವ್ಯತ್ಯಾಸದೊಂದಿಗೆ ನಷ್ಟದ ಮೂಲಕ 3 ಲಕ್ಷ ರೂ. ಸಂಪಾದಿಸುತ್ತಾನೆ. ಆದರೆ ಕೆಸಿಪಿಎಂಸಿಯ ಜೊತೆಗೆ ಪರ್ಯಾಯ ಆಲೋಚನೆ ಮಾಡಿದರೆ ಆ ಆದಾಯ ದ್ವಿಗುಣ ಆಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಕೊಬ್ಬರಿಯ ಕೊರತೆ ಕಾರಣದಿಂದ ಬೇಡಿಕೆ ಹೆಚ್ಚಿ, ಕ್ವಿಂಟಾಲ್ ಧಾರಣೆ 20,000-25,000 ತಲುಪುತ್ತದೆ.
ಈ ಒಂದು ಪ್ರಯೋಗಕ್ಕೆ ಕೆಸಿಪಿಎಂಸಿ ಸುಮಾರು ಮೊದಲ ಹಂತದಲ್ಲಿ 1000 ರೈತರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ. ಮುಂದೆ 5000 ರೈತರ ಸಹಭಾಗಿತ್ವದಲ್ಲಿ ದೊಡ್ಡ ಸಂಸ್ಥೆಯಾಗಿ ಜಾಗತೀಕ ಮಟ್ಟದಲ್ಲಿ ಮನ್ನಣೆ ಗಳಿಸಲಿದೆ. ಈಗ ಯೋಚಿಸಿ ಯಾವುದು ಉತ್ತಮ? ಸಮಗ್ರವಾಗಿ ಬೆಳೆಯಬೇಕಾದರೆ ರೈತರು ಸ್ವಯಂ ಆಲೋಚಿಸಬೇಕು. ಉತ್ತಮ ಆದಾಯತ್ತ ಹೆಜ್ಜೆ ಇಡಬೇಕು. ಮಾರ್ಗದರ್ಶನ, ತಾಂತ್ರಿಕತೆ, ತಂತ್ರಜ್ಞಾನ ಸಂಸ್ಥೆ ನೀಡುತ್ತದೆ. ಹೆಜ್ಜೆ ಇಡಲು ತೆಂಗು ಬೆಳೆಗಾರ ಆಲೋಚನೆ ಮಾಡಬೇಕಿದೆ.
✍️ ತಿಪಟೂರು ಕೃಷ್ಣ, ಪತ್ರಕರ್ತರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.