ಮಂಡ್ಯ: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ನಾಲ್ಕೈದು ದಿನವಷ್ಟೇ ಬಾಕಿ ಇದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರಿನಲ್ಲಿ 'ಕಮಲ' ಅರಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೌದು, ಸಿಎಂ ಬಿ.ಎಸ್. ಯಡಿಯೂರಪ್ಪ ತವರು ಜಿಲ್ಲೆ ಬೂಕನಕೆರೆ ಕೆ.ಆರ್. ಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅನರ್ಹತೆ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಲಿದ್ದು, ಒಂದೊಮ್ಮೆ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ, ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಭಾರತೀಯ ಜನತಾ ಪಕ್ಷ(ಬಿಜೆಪಿ) ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಬಿ.ವೈ. ವಿಜಯೇಂದ್ರ ನಮ್ಮ ತಾಲೂಕಿನ ಮಗ್ಗ. ಹೀಗಾಗಿ ನಾರಾಯಣಗೌಡರಿಗೆ ಸ್ಪರ್ಧೆಗೆ ಅವಕಾಶ ದೊರೆಯದಿದ್ದರೆ ವಿಜಯೇಂದ್ರ ಅವರಿಗೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಬೂಕಳ್ಳಿ ಮಂಜು ಮಾಧ್ಯಮದವರಿಗೆ ಸುಳಿವು ನೀಡಿದ್ದಾರೆ.