ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳದ ಬಿಸಿಯೂ ಪ್ರಯಾಣಿಕರಿಗೆ ತಟ್ಟಲಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ ಮುಂದಿನ ವಾರದಿಂದಲೇ ಶೇ. 15 ರಷ್ಟು ಪ್ರಯಾಣದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಸಮಾಲೋಚಿಸಿದ ಬಳಿಕ ಏರಿಕೆ ಪ್ರಮಾಣ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳ ಪ್ರಸ್ತಾವ?
ಪ್ರತಿದಿನ ಇಂಧನ ದರ ಏರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಿಗಮಗಳು 186 ಕೋಟಿ ರೂ. ನಷ್ಟ ಅನುಭವಿಸಿವೆ. ಹೀಗಾಗಿ ದರ ಏರಿಕೆ ಅನಿವಾರ್ಯ ವಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆಗಳು ಮೂರು ತಿಂಗಳ ಹಿಂದೆಯೇ ಶೇ. 18 ರಷ್ಟು ಪ್ರಯಾಣ ದರ ಹೆಚ್ಚಿಸುವಂತೆ ಪ್ರಸ್ತಾವ ಸಲ್ಲಿಸಿದ್ದವು. ಆದರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈವರೆಗೂ ಪ್ರಸ್ತಾವವನ್ನು ತಡೆ ಹಿಡಿದಿದ್ದೆವು. ಆದರೆ ಈಗ ದರ ಏರಿಕೆ ಅನಿವಾರ್ಯವಾಗಿದೆ. ಆದರೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಏರಿಕೆ ಮಾಡಲು ಚಿಂತಿಸುತ್ತಿದ್ದೇವೆ ಎಂದು ಸಾರಿಗೆ ಸಚಿವರು ತಿಳಿಸಿದರು.
ಡೀಸೆಲ್ ಬೆಲೆ ಇಳಿದರಷ್ಟೇ ತಗ್ಗಲಿದೆ ಹೊರೆ:
2016-17ರಲ್ಲಿ 177 ಕೋಟಿ ರೂ.ನಷ್ಟದಲ್ಲಿದ್ದ ಕೆಎಸ್ಆರ್ಟಿಸಿ, 2017-18ರಲ್ಲಿ 15 ಕೋಟಿ ರೂ.ವರೆಗೆ ಲಾಭದಲ್ಲಿತ್ತು. ಆದರೆ ಡೀಸೆಲ್ ದರ ಏರಿಕೆ, ವೇತನ ಹೆಚ್ಚಳ ಇನ್ನಿತರ ಕಾರಣಗಳಿಂದ 2018-19ನೇ ಸಾಲಿನಲ್ಲಿ ನಿಗಮ ಮತ್ತೆ ನಷ್ಟದತ್ತ ಮುಖ ಮಾಡಿದೆ. 2015-16ನೇ ಸಾಲಿನಲ್ಲಿ 13.73 ಕೋಟಿ ರೂ. ಲಾಭದಲ್ಲಿದ್ದ ಬಿಎಂಟಿಸಿ, 2016-17ರಲ್ಲಿ 260 ಕೋಟಿ ರೂ., 2017-18ರಲ್ಲೂ ನೂರು ಕೋಟಿ ರೂ.ಗೂ ಹೆಚ್ಚಿನ ನಷ್ಟ ಅನುಭವಿಸಿದೆ. ಡೀಸೆಲ್ ಬೆಲೆ ಕನಿಷ್ಠ 10 ರೂ. ಇಳಿದರಷ್ಟೇ ನಿಗಮಕ್ಕೆ ಹೊರೆ ತಗ್ಗಲಿದೆ ಎಂಬುದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಅಭಿಪ್ರಾಯವಾಗಿದೆ.
ಈ ವರ್ಷ ಉಚಿತ ಪಾಸ್ ಅನುಮಾನ:
ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಯೋಜನೆ ಈ ವರ್ಷ ಜಾರಿಯಾಗುವುದು ಬಹುತೇಕ ಅನುಮಾನವಾಗಿದೆ. ಸಮಾನ ಕಲ್ಯಾಣ ಇಲಾಖೆಯ ಎಸ್ಸಿಪಿ-ಟಿಎಸ್ಪಿ ಯೋಜನೆಯ ಹಣವನ್ನು ಬಳಸಿಕೊಂಡು ಹಣ ನೀಡಲು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ ಬೇಕಿರುವ ಶೇ. 50ರಷ್ಟು ಹಣವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಿದರೆ, ಉಳಿದ ಮೊತ್ತವನ್ನು ಸಾರಿಗೆ ಇಲಾಖೆ ಭರಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.