ಬೆಂಗಳೂರು: ಶನಿವಾರ ರಾತ್ರಿ ತೀವ್ರ ಎದೆನೋವಿನಿಂದ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ರವಾನಿಸಲು ಸೇನಾ ಹೆಲಿಕಾಪ್ಟರ್ ಬಳಸಲು ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ಸಂಜೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ದೊರೆಯಲಿದೆ.
ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ತರಲೇಬೇಕೆಂದು ಜನತೆ ಪಟ್ಟುಹಿಡಿದ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪಾರ್ಥಿವ ಶರೀರ ರವಾನಿಸಲು ಸೇನಾ ಹೆಲಿಕಾಪ್ಟರ್ ಬಳಸಲು ಅನುಮತಿ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರಲ್ಲಿ ಮನವಿ ಮಾಡಿದ್ದರು. ಆ ಮನವಿಗೆ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ.
ಹೀಗಾಗಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಕಲ್ಪಿಸಲಿದೆ. ಸದ್ಯ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಂಡ್ಯದಿಂದ ಪಾರ್ಥಿವ ಶರೀರ ಬಂದ ನಂತರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.