ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಈ ಬಾರಿ ಜೂನ್ 27 ರಂದು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಡಿ.ಕೆ. ಶಿವಕುಮಾರ ಅವರು ದೆಹಲಿಯಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದರಿಂದ ಸಭೆಯನ್ನು ನಾನೆ ನಡೆಸಿದ್ದೇನೆ. ಕಳೆದ ವರ್ಷ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಗಿತ್ತು. ಈ ಬಾರಿಯೂ ಸರಕಾರದ ವತಿಯಿಂದ ಜೂ.27 ರಂದು ಆಚರಿಸಲಾಗುತ್ತದೆ. ಬ್ಯಾಂಕೆಟ್ ಸಭಾಂಗಣ ಅಥವಾ ಯಾವ ಸ್ಥಳದಲ್ಲಿ ಆಚರಣೆ ಮಾಡಬೇಕು ಎಂಬುದರ ಬಗ್ಗೆ ಅಭಿಪ್ರಾಯ ಕೇಳಿ ಬಂದಿದೆ. ಈ ಬಗ್ಗೆ ಸಿಎಂ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಕೆಂಪೇಗೌಡರ ಜಯಂತಿಯನ್ನು ಎಲ್ಲಾ ಜಿಲ್ಲೆಗಳಲ್ಲೂ ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಅದಲ್ಲದೆ, ಎಲ್ಲಾ ಕಚೇರಿಯಲ್ಲೂ ಕೆಂಪೇಗೌಡರ ಭಾವಚಿತ್ರ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ಸ್ಥಳಗಳಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದು, ಶಾಲೆಯಲ್ಲಿ ಅವರ ಕುರಿತು ಪಠ್ಯದಲ್ಲಿ ಅಳವಡಿಕೆ ಮಾಡುವ ಬಗ್ಗೆ ಸಂಘ ಸಂಸ್ಥೆಯಿಂದ ಅಭಿಪ್ರಾಯ ಕೇಳಿ ಬಂದಿದೆ. ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ಕೆಂಪೇಗೌಡರ ಹೆಸರಲ್ಲೂ ಪ್ರಶಸ್ತಿ ಕೊಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದರು.
ಕೆಂಪೇಗೌಡ ಜಯಂತಿಗೆ ನೋಂದಣಿ ಸಂಘ ಸಂಸ್ಥೆಗಳಿಗೆ ಇಲಾಖೆಯಿಂದ ಖುದ್ದು ಆಮಂತ್ರಣ ಪತ್ರ ನೀಡಬೇಕು. ಜಯಂತಿ ಸಂಬಂಧ ಇಲಾಖೆಯು ವೆಬ್ಸೈಟ್ನಲ್ಲಿ ಸೂಕ್ತ ರೀತಿ ಮಾಹಿತಿ ನೀಡುವಂತೆಯೂ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.