ಬೆಂಗಳೂರು: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್ ಗ್ರೌಂಡ್ ನಿರ್ಮಾಣ ಹಾಗೂ ಟೆನ್ನಿಸ್ ಕ್ರೀಡೆ ಸಂಬಂಧ ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ಟೆನ್ನಿಸ್ ಅಸೋಸಿಯೇಷನ್ ನಿಯೋಗ ಸೋಮವಾರ ಉಪಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ಈ ವೇಳೆ ಸಮಾಜ ಕಲ್ಯಾಣ ಸಚಿವ ಹಾಗೂ ಅಸೋಸಿಯೇಷನ್ ಸದಸ್ಯ ಪ್ರಿಯಾಂಕ ಖರ್ಗೆ, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಇತರರು ಉಪಸ್ಥಿತರಿದ್ದರು.
Sri @DrParameshwara with @rohanbopanna & team. He has assured all his support for South Asia’s biggest challenger tournament @BengaluruOpen18 . We need such events to get #NammaBengaluru on the global sports map. pic.twitter.com/yziyuTIJc8
— Priyank Kharge (@PriyankKharge) July 30, 2018
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಾ.ಜಿ. ಪರಮೇಶ್ವರ್, ಟೆನ್ನಿಸ್ ಅಸೋಸಿಯೇಷನ್ ತಂಡ ನನ್ನನ್ನು ಭೇಟಿ ಮಾಡಿ ಹಲವು ವಿಚಾರ ಚರ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್ ಮೈದಾನ ನಿರ್ಮಾಣದ ಬಗ್ಗೆ ಮನವಿ ಮಾಡಿ, ಕೆಲವು ಸಲಹೆ ನೀಡಿದ್ದಾರೆ. ಕಬ್ಬನ್ಪಾರ್ಕ್ನಲ್ಲಿ ಟೆನ್ನಿಸ್ ಕೋರ್ಟ್ ಇದ್ದರೂ, ಕೆಲ ಷರತ್ತುಗಳಿರುವುದರಿಂದ ಎಲ್ಲರಿಗೂ ಈ ಕೋರ್ಟ್ ಬಳಕೆಯಾಗುತ್ತಿಲ್ಲ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಷ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.
ನಮ್ಮ ಸರ್ಕಾರ ಎಲ್ಲ ಬಗೆಯ ಕ್ರೀಡೆಗಳಿಗೂ ಉತ್ತೇಜನ ನೀಡುತ್ತಾ ಬಂದಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲ ರೀತಿಯ ಸವಲತ್ತೂ ನೀಡಲಾಗುತ್ತಿದೆ. ಬೆಂಗಳೂರು ಕ್ರೀಡಾ ರಾಜಧಾನಿಯಾಗಬೇಕು ಎಂಬುದೇ ನಮ್ಮ ಸರ್ಕಾರದ ಬಯಕೆ. ಈ ನಿಟ್ಟಿನಲ್ಲಿ ಬಜೆಟ್ನಲ್ಲಿ ಕ್ರೀಡೆಗೆ ಸಾಕಷ್ಟು ಅನುದಾನ ನೀಡಿದ್ದೇವೆ.
ನಗರದ ಹೊರವಲಯದಲ್ಲಿ ಸ್ಪೋರ್ಟ್ಸ್ ವಿಲೇಜ್ ನಿರ್ಮಾಣ, ಕ್ರೀಡಾ ವಿಶ್ವವಿದ್ಯಾಲಯ, ಕ್ರೀಡಾ ಸಂಬಂಧಿತ ಸಲಕರಣೆ ಉತ್ಪಾದನೆಗೆ ಅವಕಾಶ ಸೇರಿದಂತೆ ಹಲವು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ. ಒಟ್ಟಾರೆ ಕ್ರೀಡೆಗೆ ನಮ್ಮ ಬೆಂಬಲವಿರಲಿದೆ ಎಂದು ಪರಮೇಶ್ವರ್ ತಿಳಿಸಿದರು.