ಮಕ್ಕಳಿಗಾಗಿ ಆಟದ ಮೈದಾನ ರಕ್ಷಿಸಿ ಕೊಟ್ಟ ಮಾಜಿ ಶಾಸಕ ರಾಜಣ್ಣ

ಸಿಟಿಎಸ್ ಸಂಖ್ಯೆ 1378ರಲ್ಲಿ ಪ್ರಶ್ನಿಸಲ್ಪಟ್ಟ ಭೂಮಿ 4 ಎಕರೆ 3 ಗುಂಟೆಯಿದ್ದು, ಈ ಪ್ರದೇಶದಲ್ಲಿ ಇಂಡಿಯನ್ ಜಿಮ್ಖಾನಾ ಕ್ಲಬ್ ನೆಲೆಯಾಗಿತ್ತು. ಈ ಕ್ಲಬ್ 1932ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಇದೇ ಸ್ಥಳದಲ್ಲಿ ಕಾರ್ಯಾಚರಿಸುತ್ತಿತ್ತು.

Written by - Girish Linganna | Edited by - Bhavishya Shetty | Last Updated : Feb 22, 2023, 10:14 PM IST
    • ಖಾಸಗಿ ವಲಯಗಳು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುವುದು ಒಂದು ಪ್ರಮುಖ ಸಮಸ್ಯೆಯಾಗಿದೆ
    • ಭೂಕಬಳಿಕೆ ಈ ಹಿಂದಿನ ಭಾರತಿ ನಗರದಲ್ಲೂ (ಈಗಿನ ಸರ್ವಜ್ಞ ನಗರ) ನಡೆದಿದೆ
    • 1994 ರಲ್ಲಿ ಬಿಬಿಎಂಪಿ ಈ ಗುತ್ತಿಗೆ ಭೂಮಿಯನ್ನು 1 ಎಕರೆ 8 ಗುಂಟೆಗೆ ಕಡಿತಗೊಳಿಸಲು ಪ್ರಯತ್ನಿಸಿತು
ಮಕ್ಕಳಿಗಾಗಿ ಆಟದ ಮೈದಾನ ರಕ್ಷಿಸಿ ಕೊಟ್ಟ ಮಾಜಿ ಶಾಸಕ ರಾಜಣ್ಣ title=
Former MLA Rajanna

ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಧಾರ್ಮಿಕ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು, ಖಾಸಗಿ ವಲಯಗಳು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಇದಕ್ಕೆ ರಾಜಧಾನಿ ಬೆಂಗಳೂರೂ ಹೊರತಾಗಿಲ್ಲ. ಇಂತಹ ಒಂದು ಭೂಕಬಳಿಕೆ ಈ ಹಿಂದಿನ ಭಾರತಿ ನಗರದಲ್ಲೂ (ಈಗಿನ ಸರ್ವಜ್ಞ ನಗರ) ನಡೆದಿದ್ದು, ಇದನ್ನು ಕಳೆದ ವರ್ಷವಷ್ಟೇ ಪರಿಹರಿಸಲಾಗಿತ್ತು.

ಸಿಟಿಎಸ್ ಸಂಖ್ಯೆ 1378ರಲ್ಲಿ ಪ್ರಶ್ನಿಸಲ್ಪಟ್ಟ ಭೂಮಿ 4 ಎಕರೆ 3 ಗುಂಟೆಯಿದ್ದು, ಈ ಪ್ರದೇಶದಲ್ಲಿ ಇಂಡಿಯನ್ ಜಿಮ್ಖಾನಾ ಕ್ಲಬ್ ನೆಲೆಯಾಗಿತ್ತು. ಈ ಕ್ಲಬ್ 1932ರಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಇದೇ ಸ್ಥಳದಲ್ಲಿ ಕಾರ್ಯಾಚರಿಸುತ್ತಿತ್ತು. 1932ರಲ್ಲಿ ಆಗಿನ ನಗರ ಪಾಲಿಕೆ ನಾಲ್ಕು ಎಕರೆ ಮೂರು ಗುಂಟೆ ಸ್ಥಳವನ್ನು ಐದು ವರ್ಷಗಳ ಕಾಲ ಕ್ಲಬ್‌ಗೆ ಗುತ್ತಿಗೆಗೆ ನೀಡಿತ್ತು. ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 1937, 1954, 1969, 1978, 1994 ಹಾಗೂ 2008ರಲ್ಲಿ ಕ್ರಮವಾಗಿ ಗುತ್ತಿಗೆಯನ್ನು ನವೀಕರಿಸಿತು.

ಇದನ್ನೂ ಓದಿ: Crime News: ಬಡ್ಡಿ ಹಣ ಕೊಡಲಿಲ್ಲವೆಂದು ರಸ್ತೆಯಲ್ಲಿಯೇ ವ್ಯಕ್ತಿಗೆ ಥಳಿತ!

1994 ರಲ್ಲಿ ಬಿಬಿಎಂಪಿ ಈ ಗುತ್ತಿಗೆ ಭೂಮಿಯನ್ನು 1 ಎಕರೆ 8 ಗುಂಟೆಗೆ ಕಡಿತಗೊಳಿಸಲು ಪ್ರಯತ್ನಿಸಿತು. ಉಳಿದ ಭೂಮಿಯನ್ನು ನಾಗರಿಕ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿತು. ಆದರೆ ರಾಜ್ಯ ಸರ್ಕಾರ ಬಿಬಿಎಂಪಿಗೆ ಸಂಪೂರ್ಣ ಭೂಮಿಯನ್ನು ಕ್ಲಬ್‌ಗೆ 35 ವರ್ಷಗಳ ಕಾಲ ಚದರ ಅಡಿಗೆ ವಾರ್ಷಿಕ 2,800 ರೂಪಾಯಿ ಮೊತ್ತಕ್ಕೆ ಗುತ್ತಿಗೆ ನೀಡುವಂತೆ ನಿರ್ದೇಶಿಸಿತು.

2008ರಲ್ಲಿ, ಗುತ್ತಿಗೆಯ ಮುಕ್ತಾಯವಾದಾಗ ಸುಪ್ರೀಂ ಕೋರ್ಟ್ 1 ಎಕರೆ 8 ಗುಂಟೆ ಜಾಗವನ್ನು ಮಾತ್ರವೇ ಇಂಡಿಯನ್ ಜಿಮ್‌ಖಾನಾಗೆ ಪ್ರತಿ ಚದರ ಅಡಿಗೆ 2,800 ರೂಪಾಯಿ ವಾರ್ಷಿಕ ಮೊತ್ತದಂತೆ ಗುತ್ತಿಗೆಗೆ ನೀಡುವಂತೆ, ಮಿಕ್ಕಿದ ಭೂಮಿಯನ್ನು ಕ್ರೀಡಾ ಬಳಕೆಗೆ ಮತ್ತು ಸಾರ್ವಜನಿಕ ಬಳಕೆಗೆ ಮೀಸಲಿಡುವಂತೆ ಸೂಚಿಸಿತು.

ಆದರೆ 2010ರಲ್ಲಿ ಸರ್ಕಾರ ಇಂಡಿಯನ್ ಜಿಮ್‌ಖಾನಾಗೆ 4 ಎಕರೆ 21 ಗುಂಟೆ ಗುತ್ತಿಗೆ ಭೂಮಿಗೆ ಪ್ರತಿ ಎಕರೆಗೆ 60,000 ರೂಪಾಯಿ ಪಾವತಿಸುವಂತೆ, ಗುತ್ತಿಗೆಯನ್ನು ಪ್ರತಿ ವರ್ಷ 15%ದಂತೆ 3 ವರ್ಷಗಳಿಗೊಮ್ಮೆ ಹೆಚ್ಚಿಸುವಂತೆ 35 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವಂತೆ ಸೂಚಿಸಿತು.

ಈ ಸಂದರ್ಭದಲ್ಲಿ ಭಾರತಿ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್ ರಾಜಣ್ಣನವರು ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ, ಇದು ಸರ್ವೋಚ್ಚ ನ್ಯಾಯಾಲಯದ 2008ರ ತೀರ್ಪಿನ ವಿರುದ್ಧವಾಗಿದೆ ಎಂದು ಆರೋಪಿಸಿ, 2014ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡರು. ಲೋಕಾಯುಕ್ತರು ಈ ವಿಚಾರವನ್ನು ಕಾನೂನು ಇಲಾಖೆಯ ಗಮನಕ್ಕೆ ತಂದು, ಸರ್ಕಾರಕ್ಕೆ ಈ ರೀತಿ ಸಾರ್ವಜನಿಕ ಆಸ್ತಿಯನ್ನು ಗುತ್ತಿಗೆಗೆ ನೀಡುವ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು.

ಕಾನೂನು ಇಲಾಖೆ ರಾಜ್ಯ ಸರ್ಕಾರಕ್ಕೆ ಮಹಾನಗರ ಪಾಲಿಕೆಯ ಆಸ್ತಿಯನ್ನು ಗುತ್ತಿಗೆಗೆ ನೀಡುವ ಅಧಿಕಾರ ಇಲ್ಲ ಎಂದು ತಿಳಿಸಿತು. ಇದಕ್ಕೆ ಪೂರಕವಾಗಿ, ಉಪ ಲೋಕಾಯುಕ್ತರು ಒಂದು ವರದಿಯನ್ನು ಸಲ್ಲಿಸಿ, ಸರ್ಕಾರದ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದರು.

ರಾಜಣ್ಣ 2014ರಲ್ಲಿ ಇಂಡಿಯನ್ ಜಿಮ್‌ಖಾನಾಗೆ ಗುತ್ತಿಗೆಗೆ ನೀಡಿದ ಭೂಮಿ ಕೋಟಿಗಟ್ಟಲೆ ಬೆಲೆಬಾಳುತ್ತದೆ ಮತ್ತು ಈ ಜಾಗ ಮಕ್ಕಳ ಆಟದ ಮೈದಾನವಾಗಿತ್ತು ಎಂದು ತಿಳಿಸಿದರು.

2015ರಲ್ಲಿ ಸರ್ಕಾರ ಇಂಡಿಯನ್ ಜಿಮ್‌ಖಾನಾಗೆ 1 ಎಕರೆ 8 ಗುಂಟೆ ಭೂಮಿಯನ್ನು ಪ್ರತಿ ಚದರ ಅಡಿಗೆ 2,800 ರೂಪಾಯಿಗಳಂತೆ 1,46,36,160 ರೂಪಾಯಿಗೆ ಗುತ್ತಿಗೆಗೆ ನೀಡಿತು.

2015ರ ಸರ್ಕಾರದ ಆದೇಶ, 2014ರ ಉಪ ಲೋಕಾಯುಕ್ತರ ಆದೇಶ ಹಾಗೂ 2014ರ ಪತ್ರವನ್ನು ಪ್ರಶ್ನಿಸಿ ಇಂಡಿಯನ್ ಜಿಮ್‌ಖಾನಾ ಡಬ್ಲ್ಯೂ ಪಿ ಸಂಖ್ಯೆ 45070/2015 ರಿಟ್ ಅರ್ಜಿಯನ್ನು ಸಲ್ಲಿಸಿತು. ಇದಕ್ಕೆ ಪೂರಕವಾಗಿ ಹೈಕೋರ್ಟ್ ಈ ವಿಚಾರವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ಆದರೆ ಎಜಿಜಿ ಇದಕ್ಕೆ ಉತ್ತರಿಸಿ, 3/10/2016ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಇದರ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿತು.

ಎಪ್ರಿಲ್ 2017ರಲ್ಲಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಇದಕ್ಕೊಂದು ಪರಿಹಾರ ಸೂಚಿಸಿ, ಹಳೆಯ ಕ್ಲಬ್ ಇರುವ ಪ್ರದೇಶಕ್ಕೆ ಮಾತ್ರ ಬಿಬಿಎಂಪಿ ಒಪ್ಪಿಗೆ ಪಡೆದೇ ಗುತ್ತಿಗೆಗೆ ನೀಡುವಂತೆ ಸೂಚಿಸಿದರು. ಬಾಕಿ ಉಳಿದ ಪ್ರದೇಶ ಸಾರ್ವಜನಿಕರ ಆಟಕ್ಕೆ ಮತ್ತು ಕ್ಲಬ್ ಬಳಕೆಗೆ ನೀಡುವಂತೆ ನಿರ್ದೇಶಿಸಿದರು.

ಈ ಆದೇಶಕ್ಕೆ ಪ್ರತಿಯಾಗಿ, ಇಂಡಿಯನ್ ಜಿಮ್‌ಖಾನಾ ಡಬ್ಲ್ಯೂ ಪಿ ಸಂಖ್ಯೆ 21179/2017 ರಿಟ್ ಸಲ್ಲಿಸಿ, ಕರ್ನಾಟಕ ಉಚ್ಚ ನ್ಯಾಯಾಲಯ 31/8/2018ರಂದು ವಜಾಗೊಸಿದ ನಿರ್ಣಯವನ್ನು ಪ್ರಶ್ನಿಸಿತು.

ಅಂತಿಮವಾಗಿ, 2022ರಲ್ಲಿ ಸರ್ಕಾರದ ಆದೇಶ ಎನ್ಎಎಎಇಇ 152 ಎಂಎನ್‌ಜಿ 2014ರ ಹೇಳಿಕೆಯಲ್ಲಿ, 4 ಎಕರೆ 21 ಗುಂಟೆ ಭೂಮಿಯಲ್ಲಿ, 3 ಎಕರೆ 13 ಗುಂಟೆ ಪ್ರದೇಶ ಮಕ್ಕಳ ಉದ್ಯಾನ ಹಾಗೂ ಸಾರ್ವಜನಿಕ ಬಳಕೆಗೆ ನೀಡುವಂತೆ ಆದೇಶಿಸಿತು. 1 ಎಕರೆ 8 ಗುಂಟೆ ಭೂಮಿ ಇಂಡಿಯನ್ ಜಿಮ್‌ಖಾನಾ ಕ್ಲಬ್‌ಗೆ ಗುತ್ತಿಗೆಗೆ ನೀಡುವಂತೆ ಆದೇಶಿಸಿತು. ಅದರೊಡನೆ, ಕ್ಲಬ್ 2008ರಿಂದ 3 ಎಕರೆ 13 ಗುಂಟೆ ಭೂಮಿಯನ್ನು ಅನಧಿಕೃತವಾಗಿ ಉಪಯೋಗಿಸಿದ್ದಕ್ಕೆ ಬಾಕಿ ಇರುವ 5,99,53,31,544.66 ರೂಪಾಯಿ ಪಾವತಿಸುವಂತೆ ಮತ್ತು 1 ಎಕರೆ 8 ಗುಂಟೆ ಭೂಮಿಯ ಬಳಕೆಗೆ 2,16,37,28,677.77 ರೂಪಾಯಿಗಳನ್ನು ಬಿಬಿಎಂಪಿಗೆ ಪಾವತಿಸುವಂತೆ ಆದೇಶಿಸಲಾಯಿತು. 2020-21ನೇ ಸಾಲಿನ ಗುತ್ತಿಗೆ ಮೊತ್ತವನ್ನು ಬಿಬಿಎಂಪಿ ನಿರ್ಧರಿಸಲಿದೆ ಮತ್ತು ಬಾಕಿ ಉಳಿದ 3 ಎಕರೆ 13 ಗುಂಟೆ ಭೂಮಿಯನ್ನು ಬಿಬಿಎಂಪಿ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ನಿರ್ಧರಿಸಲಾಯಿತು.

ಇದನ್ನೂ ಓದಿ: ಡಿ ರೂಪಾ ಗೆ ಲೀಗಲ್ ನೋಟೀಸ್ ಕಳಿಸಿದ ರೋಹಿಣಿ ಸಿಂಧೂರಿ

ಅಂದಿನಿಂದ 3 ಎಕರೆ 13 ಗುಂಟೆ ಭೂಮಿಯನ್ನು ಬಿಬಿಎಂಪಿ ವಶಕ್ಕೆ ತೆಗೆದುಕೊಂಡು, ಇದನ್ನು ಸಾರ್ವಜನಿಕ ಆಟದ ಮೈದಾನವಾಗಿ ನಿರ್ವಹಿಸುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News