ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಈಗ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಷಯವನ್ನು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ನಾನು ಯಾವತ್ತೂ ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಿಲ್ಲ. ಸ್ಥಾನಮಾನ ನೀಡುವುದು ಮತ್ತು ಬಿಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಿದರು.
ಇದೇ ವೇಳೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಸ್ನೇಹಿತರಾದ ಸಿ.ಪಿ. ಯೋಗೇಶ್ವರ್ (CP Yogeshwar) ಪರವಾಗಿ ಭೇಟಿಮಾಡಿದ್ದೆ. ಯೋಗೇಶ್ವರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಲು ನಡ್ಡಾ ಭೇಟಿಯಾಗಿದ್ದೆ ಎಂದು ಹೇಳಿದರು.
ಸಿ.ಪಿ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಮನುಷ್ಯನಿಗೆ ಅತಿಯಾಸೆ ಇರಬಾರದು. ಸದ್ಯ ಅವರಿಗೆ ಈಗ ವಿಧಾನ ಪರಿಷತ್ ಸ್ಥಾನ ಸಿಕ್ಕಿದೆ. ಅದಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು. ಅವರಿಗೆ ಮಂತ್ರಿ ಸ್ಥಾನ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ವಿಚಾರವಾಗಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಳೆದ ಬಾರಿಗಿಂತ ಈ ಬಾರಿಯ ನಿರ್ವಹಣೆ ಉತ್ತಮವಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಿಂದ ನೀರು ಬರಲು 48 ಗಂಟೆ ಬೇಕು. ಮೇಲಿನಿಂದ ಬರುವಷ್ಟು ನೀರನ್ನು ಕೆಳಗೆ ಬಿಡಲು ಹೇಳಿದ್ದೇವೆ. ಈ ಬಾರಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು. 'ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಇರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ ನೀವು ದೆಹಲಿಯಲ್ಲಿ ಇದ್ದೀರಾ? ಎಂಬ ಪ್ರಶ್ನೆಗೆ 'ನಾನು ದೆಹಲಿಗೆ ಬಂದು ಪಂಚತಾರಾ ಹೊಟೆಲ್ ನಲ್ಲಿ ಮಜಾ ಮಾಡುತ್ತಿಲ್ಲ' ಎಂದು ಉತ್ತರಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಸೈಕಲ್ ಮೇಲೆ ಶವ ತೆಗೆದುಕೊಂಡು ಹೋಗಿದ್ದ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸೈಕಲ್ ಮೇಲೆ ಶವ ತೆಗೊಂಡೋಗಿದ್ದು ದುರ್ದೈವ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ನಾನು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದೇನೆ. ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಶಿಫ್ಟ್ ಮಾಡುವುದು ತಪ್ಪು. ಕಾನೂನು ಬದ್ದವಾಗಿ ಶಿಫ್ಟ್ ಮಾಡೋಣ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.