ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ಹಿಂಪಡೆದ ಬಳಿಕವೂ ತಾವು ರಿಲ್ಯಾಕ್ಸ್ ಆಗಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದಿಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಬ್ಬರು ಶಾಸಕರು ಹೋದರೇನಂತೆ, ಇನ್ನೂ 118 ಸದಸ್ಯರ ಬೆಂಬಲ ಇನ್ನೂ ನಮಗಿದೆ. ಹಾಗಾಗಿ ನಾನಂತೂ ರಿಲ್ಯಾಕ್ಸ್ ಆಗಿದ್ದೇನೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಕಮಲ ಕುರಿತು ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿ ಬಗ್ಗೆ ಕೋಪಗೊಂಡು ಮಾತನಾಡಿದಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಏನೇ ತಂತ್ರ ರೂಪಿಸಿದರೂ ಅದಕ್ಕೆ ಪ್ರತಿತಂತ್ರ ರೂಪಿಸುವ ಅಗತ್ಯ ನನಗಿಲ್ಲ. ನಿಮಗೆ ಬೇಕಾದ ಸುದ್ದಿ ಸೃಷ್ಟಿಸಲು ನಿಮಗೆ ಸ್ವಾತಂತ್ರ್ಯವಿದೆ. ಏನು ಬೇಕಾದರೂ ಸುದ್ದಿ ಮಾಡಿ ಎಂದರು.
ಇಂದು ಬೆಳಿಗ್ಗೆ ನಡೆದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಮತ್ತು ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ.