ಮೈಸೂರು : ಮುಂದಿನ ಚುನಾವಣೆಯಲ್ಲಿ ಆ ಬ್ರಹ್ಮ ಬಂದು ಹೇಳಿದರೂ ಸ್ಪರ್ಧಿಸುವುದಿಲ್ಲ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ 5 ವರ್ಷಗಳಲ್ಲಿ ಪ್ರಾಮಾಣಿಕವಾಗಿ ರಾಜ್ಯದ ಆಡಳಿತ ನಡೆಸಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿಯೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನಡೆಸಿದ ನಂತರ, ಪಕ್ಷದ ಹೈಕಮ್ಯಾಂಡ್ ಒತ್ತಡದಿಂದ ಪಲಾಯನವಾದ ಮಾಡಬಾರದು, ಜನರಿಗೆ ತಪ್ಪು ಮಾಹಿತಿ ಹೋಗಬಾರದು ಎಂಬ ಉದ್ದೇಶದಿಂದ ಮತ್ತೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಇದೇ ನನ್ನ ಕಡೆಯ ಚುನಾವಣೆ ಬ್ರಹ್ಮ ಬಂದು ಹೇಳಿದರೂ ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬದುಕಿರುವವರೆಗೂ ಜಾತಿವಾದಿ, ಮತಿಯವಾದಿಗಳ ವಿರುದ್ಧ ಹೋರಾಟ
ಚುನಾವಣೆ ನಿಲ್ಲುವುದಿಲ್ಲ ಎಂದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿದ ಅವರು, "ನಾನು ಚುನಾವಣೆಗೆ ನಿಲ್ಲಲ್ಲ ಎಂದು ಮಾತ್ರ ಹೇಳಿದ್ದೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತೇನೆ. ಅಧಿಕಾರದಲ್ಲಿದ್ದಾರೆ ಮಾತ್ರ ಜನಸೇವೆ ಸಾಧ್ಯ ಎಂದಿಲ್ಲ. ಪಕ್ಷದಲ್ಲಿದ್ದುಕೊಂಡು ಪಕ್ಷದ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು ಬದುಕಿರುವವರೆಗೂ ಜಾತಿವಾದಿಗಳು ಮತ್ತು ಮತೀಯವಾದಿಗಳ ವಿರುದ್ಧ ಹೋರಾಡುತ್ತೇನೆ" ಎಂದು ಸಿದ್ದರಾಮಯ್ಯ ಖಡಕ್ ಆಗಿ ಉತ್ತರಿಸಿದರು.