ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರಿಗೆ ಈ ಭಾರಿ ದಸರಾ ಉದ್ಘಾಟನೆ ಮಾಡುವ ಗೌರವ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಮೈಸೂರು ದಸರಾ ಆಚರಣೆ 2018ರ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಎಚ್ .ಡಿ .ಕುಮಾರಸ್ವಾಮಿಯವರು ಮೈಸೂರು ದಸರಾ ಆಚರಣೆ ಸಂಬಂಧ ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಜರುಗಿದ ಸಭೆಯಲ್ಲಿ ಸಚಿವರುಗಳಾದ ಡಾ.ಜಯಮಾಲ, ಡಿ .ಸಿ .ತಮ್ಮಣ್ಣ, ಸಾ.ರಾ .ಮಹೇಶ್. ಪುಟ್ಟರಾಜು, ಜಿ .ಟಿ .ದೇವೇಗೌಡ ಹಾಗೂ ಶಾಸಕ ಎಚ್ .ವಿಶ್ವನಾಥ್ ಉಪಸ್ಥಿತರಿದ್ದರು.#mysurudasara pic.twitter.com/4UjT9cS9eC
— CM of Karnataka (@CMofKarnataka) August 28, 2018
ನಾಡಹಬ್ಬ ದಸರಾ ಕುರಿತ ಎರಡನೇ ಸಭೆ ಇದಾಗಿದ್ದು, ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬರ ಮತ್ತು ಪ್ರವಾಹದಿಂದ ರಾಜ್ಯ ತತ್ತರಿಸಿದೆ. ಹೀಗಾಗಿ ಈ ವರ್ಷ ಸರಳ ದಸರಾ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಪ್ರವಾಹದಿಂದಾಗಿ ಕೊಡಗು ಸಂಕಷ್ಟದಲ್ಲಿದೆ, ಕೆಲವೆಡೆ ಬರದ ವಾತಾವರಣ ಉಂಟಾಗಿದೆ. ಹೀಗಾಗಿ ಈ ಬಾರಿ ವೈಭವೀಕರಣದ ದಸರಾ ಸಾಧ್ಯವಿಲ್ಲ. ಬದಲಾಗಿ ಸಂಪ್ರದಾಯಿಕ ಸರಳ ದಸರಾ ನಡೆಯಲಿದೆ. ಈ ಕುರಿತು ದಸರ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ದಸರಾ
ಈ ಬಾರಿ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತದೆ. ಅಂತೆಯೇ ಪ್ರವಾಸಿಗರ ಆರ್ಕಷಿಸುವ ದಸರಾ ನಡೆಸಲಾಗುತ್ತದೆ. ದಸರಾ ಮೆರವಣಿಗೆಯ ಉದ್ದಕ್ಕೂ ಎಲ್ಸಿಡಿ ಪರದೆ ಹಾಕಲಾಗುತ್ತದೆ. ಇನ್ನು ಈ ಬಾರಿ ದಸರೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ಸುಧಾಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಿಎಂ ತಿಳಿಸಿದರು.
ಸೆಪ್ಟೆಂಬರ್ 02ರಂದು ಮೊದಲ ತಂಡದ ಗಜಪಯಣ
ಸೆಪ್ಟಂಬರ್ 2ರಂದು ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ತಂಡದ ಗಜ ಪಯಣ ಆರಂಭವಾಗಲಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಮೈಸೂರಿನತ್ತ ಗಜ ಪಯಣ ಆರಂಭವಾಗಲಿದೆ ಎಂದು ಸಿಎಂ ಮಾಹಿತಿ ನೀಡಿದರು.