ಧಾರವಾಡ: ಡಿ.23 ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು, ಸರಕಾರ ಹಂತದಲ್ಲಿ ಪರಿಹರಿಸಬೇಕಾದ ಮತ್ತು ಕೊರ್ಟ, ಪಾಲಸಿ ಸಂಬಂದಿ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳಿಯವಾಗಿ ಪರಿಹರಿಸಲಾಗಿದೆ. ಬರುವ ಜನವರಿಯಿಂದ ಸಾರ್ವಜನಿಕರ ಅನಕೂಲಕ್ಕಾಗಿ ತಾಲೂಕು ಹಂತದಲ್ಲಿ ಜನತಾ ದರ್ಶನ ಆಯೋಜಿಸಲಾಗುವುದು ಎಂದು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಳೆದ ಸಪ್ಟೆಂಬರದಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ ಮೂರು ಜನತಾ ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರಿಂದ ಸುಮಾರು 730 ಅಹವಾಲುಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ 650 ಅಹವಾಲುಗಳನ್ನು ಇತ್ಯರ್ಥಡಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಹರಿಸಲು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಮುಸ್ಕಾನ್
ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿದ್ದು, ಸಮಸ್ಯೆ ಅಹವಾಲುಗಳ ಸಲ್ಲಿಕೆ ಕಡಿಮೆ ಆಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಮತ್ತು ಬಾಧಿತ ವ್ಯಕ್ತಿಗಳಿಗೆ ಇನ್ನೂ ಅನಕೂಲವಾಗಿ, ಅವರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಲು ಸಹಾಯವಾಗುವಂತೆ ಬರುವ ಜನವರಿಯಿಂದ ತಾಲೂಕುಮಟ್ಟದಲ್ಲಿ ಜನತಾದರ್ಶನ ಆಯೋಜಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬರಗಾಲ ಸ್ಥಿತಿ ತೀವ್ರವಾಗುವ ಸಂಭವ: ಹಿಂದೆಂದೂ ರಾಜ್ಯ ಕಾಣದ ಬರ ಪರಿಸ್ಥಿತಿ ರಾಜ್ಯದಲ್ಲಿ ಮೂಡಿದೆ. ಇದು ಮುಂದಿನ ಆರು ತಿಂಗಳಲ್ಲಿ ಇನ್ನೂ ತೀವ್ರವಾಗುವ ಸಂಭವವಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ಹೇಳಿದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ಚುರುಕಾಗಿ ಪ್ರವೃತ್ತರಾಗಬೇಕು. ಮುಂದಿನ ಆರು ತಿಂಗಳು ಕುಡಿಯುವ ನೀರು, ಮೇವು, ಉದ್ಯೋಗ ಸಮಸ್ಯೆ ಬರಬಹುದು. ಇದಕ್ಕೆ ಈಗಿನಿಂದಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಬೊರವೇಲ್ ಕೊರೆಸಲು ಕ್ರಮವಹಿಸಬೇಕು. ಕುಡಿಯುವ ನೀರು ಸಮಸ್ಯೆ ಇರುವ ಸಂಭವನೀಯ ಪ್ರದೇಶ ಗುರುತಿಸಿ, ಅಲ್ಲಿ ಖಾಸಗಿ ಬೊರವೇಲ್ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಮಾಡಿ, ಅವರಿಗೆ ಮುಂಚಿತವಾಗಿ ಆದೇಶ ನೀಡಲು ಸಚಿವರು ಸೂಚಿಸಿದರು.
ಬರಗಾಲ ಸಂದರ್ಭದಲ್ಲಿ ಜಾನುವಾರಗಳಿಗೆ ಮೇವು ಕೊರತೆ ಆಗದಂತೆ ಎಚ್ಚರಿಕೆವಹಿಸಬೇಕು. ಮೇವು ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ, ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.
ಇದನ್ನೂ ಓದಿ: ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ ಖಂಡನೀಯ: ಬಸವರಾಜ ಬೊಮ್ಮಾಯಿ
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪ ಪೋಲಿಸ್ ಆಯುಕ್ತ ರಾಜೀವ ಎಂ., ಪೋಲಿಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ,ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ ಕುಮಾರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾನಗರ ಸೇರಿದಂತೆ ವಿವಿಧ ತಾಲೂಕುಗಳ ಸಾರ್ವಜನಿಕರು ಜನತಾದರ್ಶನದಲ್ಲಿ ಭಾಗವಹಿಸಿ, ತಮ್ಮ ಅಹವಾಲುಗಳನ್ನು ಸಲ್ಲಿಸಿದರು.