ಶಿವಮೊಗ್ಗ: ನಿರಂತರ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ 10,000 ಕೋಟಿ ರೂ.ಗಳ ಆರ್ಥಿಕ ನೆರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ನಗರದಲ್ಲಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ಆಗಮಿಸಿದ್ದ ಯಡಿಯೂರಪ್ಪ ಅವರು, ಪ್ರವಾಹದಿಂದ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಎಎನ್ಐ ಜೊತೆ ಮಾತನಾಡಿರುವ ಅವರು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಆಗಸ್ಟ್ 16ರಂದು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.
"ರಾಜ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಬ್ಬರೂ ಆಗಮಿಸಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಸುಮಾರು 50,000 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳ ಆರ್ಥಿಕ ನೇರವು ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತೇನೆ" ಎಂದು ಸಿಎಂ ಯಡಿಯೂರಪ್ಪ ಹೇಳಿದರು.
Karnataka CM BS Yediyurappa on flood-situation in the state: Situation is very bad. Home Minister Amit Shah & Finance Minister Nirmala Sitharaman also conducted inspection. Loss of over 50,000 cr in the state. On 16th Aug, I'm going to Delhi to meet PM regarding this pic.twitter.com/dkPuiIxE4d
— ANI (@ANI) August 13, 2019
ರಾಜ್ಯದಲ್ಲಿ ಪ್ರವಾಹದಿಂದಾಗಿ ಇದುವರೆಗೆ 48 ಮಂದಿ ಸಾವನ್ನಪ್ಪಿದ್ದು, 12 ಮಂದಿ ಕಾಣೆಯಾಗಿದ್ದಾರೆ. ಒಟ್ಟು 4,08,322 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಪ್ರವಾಹ ಸಂತ್ರಸ್ತರ ಅನುಕೂಲಕ್ಕಾಗಿ ಪ್ರಸ್ತುತ ರಾಜ್ಯದಲ್ಲಿ 1,224 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 3,93,956 ಜನರು ಆಶ್ರಯ ಪಡೆದಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.