ಹುಬ್ಬಳ್ಳಿ: ಹಿರಿಯ ಪತ್ರಕರ್ತ, ರಾಜ್ಯಸಭೆಯ ಮಾಜಿ ಸದಸ್ಯ ಪಾಪು ಎಂದೇ ಖ್ಯಾತಿ ಪಡೆದಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ(102) ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.
ಹಿಂದಿನಿಂದಲೂ ಕನ್ನಡನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿದ್ದ ನಾಡೋಜ ಪ್ರಶಸ್ತಿ ಪುರಸ್ಕೃತ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಪತ್ರಕರ್ತರು ಮಾತ್ರವಲ್ಲದೆ, ಕರ್ನಾಟಕದ ಏಕೀಕರಣದ ರೂವಾರಿಯಾಗಿದ್ದರು.
ಪಾಟೀಲ ಪುಟ್ಟಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿ ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ಕರ್ನಾಟಕ ವಿಶ್ವ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದರು. ಕರ್ನಾಟಕದ ಧ್ವನಿಯಾಗಿದ್ದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಹ ದೊರೆತಿದೆ.
ಸಾರ್ವಜನಿಕ ಜೀವನದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪಾಟೀಲ ಪುಟ್ಟಪ್ಪನವರು ರಾಜ್ಯಸಭಾ ಸದಸ್ಯರಾಗಿ, ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಸಂಸ್ಥಾಪನಾ ಅಧ್ಯಕ್ಷ, ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಭಾನುವಾರವಷ್ಟೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪುಟ್ಟಪ್ಪನವರಿಗೆ ರಾಷ್ಟ್ರೀಯ ಬಸವ ಪುರಸ್ಕಾರದೊಂದಿಗೆ ಹತ್ತು ಲಕ್ಷ ರೂ. ನಗದು ನೀಡಲಾಗುವುದು. ಜೊತೆಗೆ ಡಾ.ಪಾಟೀಲ ಪುಟ್ಟಪ್ಪ ಅವರ ಆರೋಗ್ಯದ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ...
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ. ರಾಜ್ಯಸಭಾ ಸದಸ್ಯರಾಗಿ ದೆಹಲಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ ಎಂದಿದ್ದಾರೆ.
ಪುಟ್ಟಪ್ಪ ಅವರ ಅಗಲಿಕೆಯಿಂದ ನಾಡು-ನುಡಿ ಬಡವಾಗಿದೆ:
ಹಿರಿಯ ಪತ್ರಕರ್ತ, ಕನ್ನಡದ ಕಟ್ಟಾಳು ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾದ ಪಾಟೀಲ್ ಪುಟ್ಟಪ್ಪ ಅವರ ಅಗಲಿಕೆಯಿಂದ ನಾಡು-ನುಡಿ ಬಡವಾಗಿದೆ. ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಸದಾ ಟೊಂಕಕಟ್ಟಿ ನಿಲ್ಲುತ್ತಿದ್ದ ಪಾಪು ಕನ್ನಡದ ನಿಷ್ಠಾವಂತ ಕಾವಲುಗಾರರಾಗಿದ್ದರು. ಅವರ ಗೆಳೆಯರು ಮತ್ತು ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.
ಪಾಪುರವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು:
ಪಾಪು ಎಂಬ ಕಾವ್ಯನಾಮದಿಂದಲೇ ಖ್ಯಾತರಾದವರು ಪಾಟೀಲ ಪುಟ್ಟಪ್ಪ ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಬಹುದೊಡ್ಡ ಹೆಸರು ಗಳಿಸಿದವರು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾಪುರವರು ಕನ್ನಡ ನಾಡು, ನುಡಿಗಾಗಿ ಜೀವನದುದ್ದಕ್ಕೂ ಶ್ರಮಿಸಿದವರು.ಇಂದು ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಪಾಟೀಲ ಪುಟ್ಟಪ್ಪ ಅವರ ನಿಧನ ಇಡೀ ಕರ್ನಾಟಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ. ಅವರ ಕುಟುಂಬದವರಿಗೆ ಮತ್ತು ಅನುಯಾಯಿಗಳಿಗೆ ಈ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಧೀಮಂತ ನಾಯಕನಿಗೆ ಭಾವಪೂರ್ವ ವಿದಾಯಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಸಾಹಿತಿ, ಪತ್ರಕರ್ತರು, ಮೇಲಾಗಿ ನಾಡಿನ ಭಾಷೆಯ ಹಿತಕ್ಕಾಗಿ ತಮ್ಮ ಜೀವಮಾನವಿಡೀ ದಣಿದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಡಾ. ಪಾಟೀಲ್ ಪುಟ್ಟಪ್ಪನವರು ವಿಧಿವಶರಾದ ಸುದ್ದಿ ಮನಸಿಗೆ ವ್ಯಸನವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಸ್ಥರಿಗೆ ಹಾಗೂ ನಾಡಿನ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ದುಃಖ ವ್ಯಕ್ತಪಡಿಸಿದ್ದಾರೆ.
ಪಾಪು ಎಂದೇ ಖ್ಯಾತರಾಗಿದ್ದ ಶ್ರೀ ಪಾಟೀಲ ಪುಟ್ಟಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿ ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡಪರ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ನವಯುಗ ಮಾಸ ಪತ್ರಿಕೆಯ ಸಂಪಾದಕರಾಗಿ ಹಾಗೂ ‘ಪ್ರಪಂಚ’ ಪತ್ರಿಕೆಯನ್ನು ಸ್ಥಾಪಿಸಿದ್ದಲ್ಲದೆ, ಅಂಕಣಕಾರರಾಗಿಯೂ ಆಗಿದ್ದರು. ನಾಡೋಜ, ಖ್ಯಾತ ಪತ್ರಕರ್ತ ಹಾಗೂ ಲೇಖಕ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ನಾಡೋಜ ಪ್ರಶಸ್ತಿ ಪುರಸ್ಕೃತ ಸಾಹಿತಿ ಪಾಟೀಲ ಪುಟ್ಟಪ್ಪನವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ.
ಪಾಟೀಲ ಪುಟ್ಟಪ್ಪನವರ ಅಗಲಿಕೆಯಿಂದ ಸಾರಸತ್ವ ಲೋಕ ಬಡವಾಗಿದೆ ಈ ಅಗಲಿಕೆಯನ್ನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್ ರವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ನಾಡೋಜ ಪುರಸ್ಕೃತರಾದ ಪಾಟೀಲ್ ಪುಟ್ಟಪ್ಪ ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶತಾಯುಷಿ ಗಳಾಗಿದ್ದ ಪಾಟೀಲ್ ಪುಟ್ಟಪ್ಪ ಅವರು ಕನ್ನಡದ ದಿಟ್ಟ ಹೋರಾಟಗಾರರಾಗಿ ಏಕೀಕರಣದ ರೂವಾರಿಗಳಾಗಿ ನಾಡಿನ ಭಾಷೆ ಸಂಸ್ಕೃತಿಗೆ ಅಪಾರವಾದ ಕಾಣಿಕೆ ಸಲ್ಲಿಸಿದ್ದರು. ಇವರ ಅಗಲಿಕೆಯಿಂದ ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.