ಬೆಂಗಳೂರು: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ 10 ಮಹಿಳಾ ಚಾಲಕಿಯರು ಇರುವ ‘ಪಿಂಕ್’ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಲು ಕೆಎಸ್ಟಿಡಿಸಿ ಸಜ್ಜಾಗಿದ್ದು, ಇಂದು ಬೆಳಿಗ್ಗೆ 9:15ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಓಡಾಟಕ್ಕೆ ಚಾಲನೆ ಸಿಗಲಿದೆ. ಸೇವೆಯು 24x7 ಲಭ್ಯವಿರುತ್ತದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಹಿಳೆಯರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಈ ಹೊಸ ಹೆಜ್ಜೆ ಇಟ್ಟಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ 10 ಮಹಿಳಾ ಚಾಲಕಿಯರು ಇರುವ ‘ಪಿಂಕ್’ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಲು ಕೆಎಸ್ಟಿಡಿಸಿ ಸಜ್ಜಾಗಿದೆ. ಜೂನ್ ನಿಂದ ಇದನ್ನು 50ಕ್ಕೆ ವಿಸ್ತರಿಸಲು ಯೋಜಿಸಲಾಗಿದೆ.
ಟ್ಯಾಕ್ಸಿ ಒದಗಿಸುವವರು ಈಗಾಗಲೇ ಕಳೆದ ಮೂರು ವರ್ಷಗಳಿಂದ ಮಹಿಳಾ-ಮಾತ್ರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದ್ದಾರೆ, ಆದರೆ ಸ್ಪಾಟ್ ಬುಕಿಂಗ್ ಮಾಡುವ ಸ್ಥಳದಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಮೊದಲ ಬಾರಿಗೆ ಈ ಸೇವೆ ಲಭ್ಯವಾಗಲಿದೆ.
ಟ್ಯಾಕ್ಸಿ ಕಾಯ್ದಿರಿಸಲು 080–44664466 ಅಥವಾ ಕೆಎಸ್ಟಿಡಿಸಿ ಆ್ಯಪ್ ಸಂಪರ್ಕಿಸಬಹುದು. ಪ್ರಯಾಣ ದರ (ಪ್ರತಿ ಕಿ.ಮೀಗೆ) ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ 21.50 ರೂ., ಮಧ್ಯರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ 23.50ರೂ. ನಿಗದಿ ಪಡಿಸಲಾಗಿದೆ.
ಈ ಟ್ಯಾಕ್ಸಿಗಳಿಗೆ ಗುಲಾಬಿ ಬಣ್ಣ ಬಳೆಯಲಾಗಿದ್ದು, ಸುಲಭವಾಗಿ ಅದನ್ನು ಗುರುತಿಸಬಹುದಾಗಿದೆ. ಜಿಪಿಎಸ್ ಸಾಧನ, ಎಂಡಿಟಿ ಸಾಧನ ಹಾಗೂ ಪ್ಯಾನಿಕ್ ಬಟನ್ ಸೇವೆ ಸಹ ಟ್ಯಾಕ್ಸಿಯಲ್ಲಿ ಲಭ್ಯವಿದೆ. ಟ್ಯಾಕ್ಸಿಗಳ ಮೇಲೆ ದಿನದ 24 ಗಂಟೆಯೂ ನಿಗಾವಹಿಸುವ ವ್ಯವಸ್ಥೆ ಇದೆ ಎಂದು ಕೆಎಸ್ಟಿಡಿಸಿ ತಿಳಿಸಿದೆ.