ಬೆಂಗಳೂರು: ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಮರುಜೀವ ಬಂದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಚಳಿಗಾಲದ ರಜೆ ಮುಗಿದ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಪ್ರಕರಣದ ಮೂಲ ಅರ್ಜಿದಾರರಾದ ಕಬ್ಬಾಳೇಗೌಡ ಮತ್ತು ಟಿ. ಅಬ್ರಹಾಂ ಅರ್ಜಿ ಹಿಂಪಡೆಡಿದ್ದ ಕಾರಣದಿಂದಾಗಿ ಸೆಪ್ಟೆಂಬರ್‌ನಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮಧ್ಯೆ ಪ್ರವೇಶದ ಅರ್ಜಿ ಸಲ್ಲಿಸಿತ್ತು. ಆದರೆ ಮೂರು ತಿಂಗಳಾದರೂ ಅರ್ಜಿಯು ಇನ್ನೂ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಬೆನ್ನಿಗಾನಹಳ್ಳಿಯಲ್ಲಿ 4.20 ಎಕರೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಮನವಿ ಶುಕ್ರವಾರ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಚಳಿಗಾಲದ ರಜೆ ಮುಗಿದ ನಂತರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿತು.
ಏನಿದು ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ?
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ಬೆನ್ನಿಗಾನಹಳ್ಳಿಯಲ್ಲಿ 1962ರಲ್ಲಿ ಬಿ.ಕೆ. ಶ್ರೀನಿವಾಸನ್ ಎಂಬುವ ವ್ಯಕ್ತಿ ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ 2010ರ ಮೇ 13ರಂದು ಸ್ವಾಧೀನವಾದ ಜಮೀನಿನ ಪೈಕಿ 4.5 ಎಕರೆ ಜಮೀನನ್ನು ಡೀನೋಟಿಫೈ ಮಾಡಲಾಗಿತ್ತು.
1986ರಲ್ಲಿ ಎನ್ಜಿಇಎಫ್ ಲೇಔಟ್ ನಿರ್ಮಾಣಕ್ಕಾಗಿ ಸರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ, 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ನೋಟಿಫೈ ಮಾಡಿರುವ ವಿಷಯ ಗೊತ್ತಿದ್ದೂ 1.62 ಕೋಟಿ ರೂ. ನೀಡಿ ಶ್ರೀನಿವಾಸನ್ ಅವರಿಂದ ಈ ಭೂಮಿಯನ್ನು ಖರೀದಿಸಿದ್ದರು. 2010ರಲ್ಲಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 29 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶಕ್ಕಾಗಿ ಡಿನೋಟಿಫೈ ಮಾಡಿದ್ದರು.
2010ರಲ್ಲಿ ಬೆನ್ನಿಗಾನಹಳ್ಳಿ 4.5 ಎಕರೆ ಜಾಗವನ್ನು ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಅವರು ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಮೀನಿನ ಮೂಲ ಮಾಲಿಕ ಕಬ್ಬಾಳೇಗೌಡರು ಲೋಕಾಯುಕ್ತ ಕೋರ್ಟ್ನಲ್ಲಿ ಡಿಕೆಶಿ, ಬಿಎಸ್ವೈ ವಿರುದ್ಧ ದೂರು ಸಲ್ಲಿಸಿದ್ದರು. ಸಿಎಜಿ ವರದಿಯನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ, 2015ರ ಡಿಸೆಂಬರ್ 18ರಂದು ರಾಜ್ಯ ಹೈಕೋರ್ಟ್ ಈ ಪ್ರಕರಣ ಕುರಿತ ಅರ್ಜಿ ವಜಾಗೊಳಿಸಿತ್ತು.