ಪೇಶಾವರ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಗಸ್ಟ್ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮದ ವರದಿಯೊಂದು ಸೋಮವಾರ ತಿಳಿಸಿದೆ.
ಇಸ್ಲಮಾಬಾದ್'ನಲ್ಲಿ ಖೈಬರ್ ಪಖ್ತನ್ಖವಾದಲ್ಲಿ ನೂತನವಾಗಿ ಚುನಾಯಿತರಾದ ಪಕ್ಷದ ಸದಸ್ಯರೊಂದಿಗೆ ಮಾತನಾಡುತ್ತಾ, ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪ್ರಧಾನಿಯನ್ನು ಕೂಡಲೇ ನೇಮಕ ಮಾಡಲಾಗುವುದು ಎಂದು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಸಂಸ್ಥಾಪಕ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾಗಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.
ಆದರೆ, ಜುಲೈ 25ರಂದು ನಡೆದ ಪಾಕಿಸ್ತಾನ ಚುನಾವಣೆಯಲ್ಲಿ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದಷ್ಟು ಬಹುಮತ ಸಿಕ್ಕಿರಲಿಲ್ಲ. ಹಾಗಾಗಿ ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯೆಯನ್ನು ಗಳಿಸಲು ಪಿಟಿಐ ಪಕ್ಷ ಮುತ್ತಾಹಿದ್ ಖ್ವಾಮಿ ಮೂವ್ ಮೆಂಟ್(MQM-P), ಗ್ರಾಂಡ್ ಡೆಮಾಕ್ರೆಟಿಕ್ ಅಲಯನ್ಸ್(GDA), PML-Q ಮತ್ತು ಬಲೂಚಿಸ್ತಾನ್ ಅವಾಮಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದು, ಇವರ ನೆರವಿನೊಂದಿಗೆ ಆಗಸ್ಟ್ 11ರಂದು ಖಾನ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ್ ಹೇಳಿದೆ.