ನವದೆಹಲಿ: ವಿವಾದಾತ್ಮಕ ರೀತಿಯಲ್ಲಿ ಶ್ರೀಲಂಕಾದ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ಈಗ ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ದಿ ಕೊಲೊಂಬೋ ಪೋಸ್ಟ್ ವರದಿ ಮಾಡಿದೆ.
ಇನ್ನೊಂದೆಡೆಗೆ ಅಕ್ಟೋಬರ್ 26 ರಂದು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದ ರಾಣಿಲ್ ವಿಕ್ರಮಸಿಂಘೆ ಭಾನುವಾರದಂದು ಶ್ರೀಲಂಕಾದ ಪ್ರಧಾನಿಯಾಗಿ ಮತ್ತೆ ನೇಮಕವಾಗಲಿದ್ದಾರೆ ಎಂದು ತಿಳಿದುಬಂದಿದೆ.ಈಗ ರಾಜಪಕ್ಸೆಯವರ ನೇಮಕವನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಈಗ ಅವರು ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಏಕಾಏಕಿ ರಾಣಿಲ್ ವಿಕ್ರಮಸಿಂಘೆರನ್ನು ಪ್ರಧಾನಿ ಹುದ್ದೆಯಿಂದ ಕಿತ್ತು ಹಾಕಿ ಆ ಹುದ್ದೆಗೆ ಮಹಿಂದಾ ರಾಜಪಕ್ಸೆಯವರನ್ನು ನೇಮಕ ಮಾಡಿದ್ದರು. ಈ ನಿರ್ಧಾರ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈಗ ಅವರ ರಾಜೀನಾಮೆ ನಿರ್ಧಾರದಿಂದ ಕೊನೆಗೂ ನಾಟಕೀಯ ಬೆಳವಣಿಗೆಯೂ ಅಂತ್ಯಗೊಳ್ಳಲಿದೆ ಎನ್ನಲಾಗಿದೆ.