ಇಂದಿನಿಂದ ರಾಜ್ಯದಲ್ಲಿ ಮೋದಿ ಅಲೆ

ಚಾಮರಾಜನಗರ ಜಿಲ್ಲೆಯ ಸಂತೆಮರನಹಳ್ಳಿಯಿಂದ ಪ್ರಾರಂಭವಾಗಲಿದೆ ಮೋದಿ ಅಬ್ಬರ.

Last Updated : May 1, 2018, 08:36 AM IST
ಇಂದಿನಿಂದ ರಾಜ್ಯದಲ್ಲಿ ಮೋದಿ ಅಲೆ title=

ಸಂತೆಮರನಹಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಪುಷ್ಠಿ ನೀಡಲು ಇಂದಿನಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಚುನಾವಣಾ ಅಖಾಡದಲ್ಲಿ ಇಳಿಯಲಿದ್ದಾರೆ.  ದಿನ ಬಿಟ್ಟು ದಿನ ಐದು ದಿನ ಪ್ರಚಾರಾಂದೋಲನದಲ್ಲಿ ಪಾಲ್ಗೊಳ್ಳಲಿರುವ ಮೋದಿ ಹಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಂತೆಮರನಹಳ್ಳಿಯಿಂದ ಮೋದಿ ಅವರ ಪ್ರಚಾರಾಂದೋಲನ ಪ್ರಾರಂಭವಾಗಲಿದ್ದು, ಇಂದು ಬೆಳಿಗ್ಗೆ 11:30 ರ ವೇಳೆಗೆ ಸಂತೆಮರನಹಳ್ಳಿಯಲ್ಲಿ ಆಯೋಜಿಸಲಾಗಿರುವ ರ್ಯಾಲಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ಐದು ದಿನಗಳಲ್ಲಿ ಮೋದಿ ಸುಮಾರು ಒಂದು ಡಜನ್ ರ್ಯಾಲಿಯನ್ನು ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 

ಚುನಾವಣಾ ಕಣಕ್ಕೆ ಮೋದಿ ಎಂಟ್ರಿ, ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಹುರುಪು ನೀಡುವುದರ ಜೊತೆಗೆ ಭಿನ್ನಮತ ಶಮನಕ್ಕೂ ಮುಂದಾಗಲಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಕರ್ನಾಟಕದಲ್ಲಿ ಮಂಗಳವಾರದಿಂದ ಮೋದಿ-ಅಮಿತ್ ಶಾ ಜುಗಲ್ ಬಂದಿ ಪ್ರಾರಂಭವಾಗಲಿದೆ.

ಬೆಳಿಗ್ಗೆ 11:30ಕ್ಕೆ ಚಾಮರಾಜನಗರ ಸಂತೆಮರನಹಳ್ಳಿಗೆ ಭೇಟಿ ನೀಡಲಿರುವ ಮೋದಿ ಬಳಿಕ ಮಧ್ಯಾಹ್ನ 03:00ಕ್ಕೆ ಉಡುಪಿಗೆ ಆಗಮಿಸಲಿರುವ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಲಿದ್ದಾರೆ. ನಂತರ ಎಂಜಿಎಂ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಸಂಜೆ 06:00ಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿಕ್ಕೋಡಿಯಲ್ಲಿ ಈಗಾಗಲೇ ಹೈ ಆಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ, 6 ಜನ ಎಸ್ಪಿ,  12 ಡಿಎಸ್ಪಿ, 35 ಇನ್ಸ್ ಪೆಕ್ಟರ್, 50 ಪಿಎಸ್ಐ, 8 ಕೆಎಸ್ಆರ್ ಪಿ ಸಿಬ್ಬಂದಿ ನೇಮಕ ಮಾಡಿ ಬಿಗಿ ಭದ್ರತೆ ಕೈಗೊಂಡಿದೆ.

Trending News