ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು (1973) ಸಿನಿಮಾ ಬಗ್ಗೆ ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಎವರ್ ಗ್ರೀನ್ ಸಿನಿಮಾ ಇದೀಗ ಡಿಜಿಟಲ್ ಟಚ್'ನೊಂದಿಗೆ ತೆರೆಗೆ ಬರಲು ಸಿದ್ದವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಹೊಸ ಸುದ್ದಿ ಏನಪ್ಪಾ ಅಂದ್ರೆ, ನಾಗರಹಾವು ಚಿತ್ರದ ಮೇಕಿಂಗ್ ವೀಡಿಯೋವನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಈ ಚಿತ್ರದ ರಿರೆಕಾರ್ಡಿಂಗ್ ಕಾರ್ಯ, ಹಿನ್ನೆಲೆ ಸಂಗೀತ ನೀಡಿದ ಹಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೆಲ್ಲಾ ಕೇಳುತ್ತಿದ್ದರೆ ಚಿತ್ರಪ್ರೇಮಿಗಳು ರೋಮಾಂಚನಗೊಳ್ಳುತ್ತಾರೆ.
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಚಿತ್ರವನ್ನು ಇದೀಗ ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬೃಹತ್ ಪರದೆ ಮೇಲೆ ಮೂಡಿಸಲು ನಾಗರಹಾವು ಚಿತ್ರವನ್ನು ಈಗ ಸಿನಿಮಾ ಸ್ಕೋಪ್ ಮತ್ತು 7.1 ಡಿಟಿಎಸ್ ಸೌಂಡ್ ಎಫೆಕ್ಟ್ನಲ್ಲಿ ತಯಾರಿಸಲಾಗುತ್ತಿದೆ. ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರಕ್ಕೆ ಹೊಸದಾಗಿ ಕಲರಿಂಗ್ ಮಾಡಿಸಿದ್ದು ತೆರೆಯ ಮೇಲೆ ತಾಂತ್ರಿಕವಾಗಿ ಅದ್ಭುತವಾಗಿ ಕಾಣಲಿದೆ. ಅಲ್ಲದೆ, ಇಡೀ ಚಿತ್ರಕ್ಕೆ ಇಂದಿನ ತಂತ್ರಜ್ಞಾನವನ್ನೇ ಬಳಸಿಕೊಂಡು ಹೊಸದಾಗಿ ರೀ ರೆಕಾರ್ಡಿಂಗ್ ಮಾಡಲಾಗಿದೆ.
ಹೊಸ ರೂಪದಲ್ಲಿ ಬ್ಲಾಕ್ಬಸ್ಟರ್ ಸಿನಿಮಾ 'ನಾಗರಹಾವು'; ಟ್ರೆಂಡಿಂಗ್ ಆಯ್ತು ಚಿತ್ರದ ಟೀಸರ್!
ನಾಗರಹಾವು ಹೊಸ ರೂಪ ಪಡೆಯಲು ಎರಡು ವರ್ಷ ತೆಗೆದುಕೊಂಡಿದೆ. ಮುಂಬಯಿ, ಚೆನ್ನೈ, ಬೆಂಗಳೂರಿನ ಕೆಲ ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ 'ನಾಗರಹಾವು’ ಟೀಸರ್ ಬಿಡುಗಡೆಮಾಡಲಾಗಿತ್ತು. ಅದಕ್ಕೆ ಸಾಕಷ್ಟು ಕಾಮೆಂಟ್ಗಳ, ಲೈಕ್ಗಳ ಮಹಾಪೂರವೇ ಹರಿದುಬಂದಿತ್ತು. ಕಿಚ್ಚ ಸುದೀಪ್ ಅವರು ಈ ಟೀಸರನ್ನು ಬಿಡುಗಡೆ ಮಾಡಿದ್ದರು.