ಬೆಂಗಳೂರು: ಇದುವರೆಗೂ ರಾಜಕೀಯದಲ್ಲಿ ಬ್ಯುಸಿ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಸದ್ದಿಲ್ಲದೇ ಬಾಯಲ್ಲಿ ರೋಸ್ ಹಿಡ್ಕೊಂಡು 'ಐ ಲವ್ ಯೂ' ಎನ್ನುತ್ತಿದ್ದಾರೆ. ಇದೇನಿದು ಎಂದು ಕನ್ಫ್ಯೂಸ್ ಆಗುತ್ತಿದ್ದೀರಾ? ಅಲ್ಲೇ ಇರೋದು ವಿಷಯ! ಅಷ್ಟಕ್ಕೂ ಉಪೇಂದ್ರ ಈ ಗೆಟಪ್ ಅಲ್ಲಿ ಕಾಣಿಸಿಕೊಂಡಿರೋದು 'ಐ ಲವ್ ಯೂ' ಚಿತ್ರದ ಚಿತ್ರಿಕರಣಕ್ಕಾಗಿ... 'A', 'ಬದ್ಧಿವಂತ', 'ಉಪೇಂದ್ರ' ಚಿತ್ರಗಳ ನಂತರ ಈ ಚಿತ್ರದಲ್ಲಿ ಉಪೇಂದ್ರ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಉಪೇಂದ್ರ ಅವರು ತುಂಡು ಬಟ್ಟೆಯಲ್ಲಿ ರೋಸ್ ಹಿಡಿದು 'ಐ ಲವ್ ಯು' ಎಂದಿರುವುದು ಸಖತ್ ವೈರಲ್ ಆಗಿತ್ತು. ಅಷ್ಟೇ ಅಲ್ಲ, ರಿಯಲ್ ಸ್ಟಾರ್ ಈಸ್ ಬ್ಯಾಕ್ ಎಂಬ ಟ್ಯಾಗ್ ಲೈನ್ ಉಪೇಂದ್ರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.
ಈ ಹಿಂದೆ ಉಪೇಂದ್ರ ತಮ್ಮ "ಎ' ಸಿನಿಮಾದಲ್ಲಿ, "ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದೆನೇಕಾಯಿ' ಎಂದಿದ್ದರು. ಆದರೆ, ಈಗ 15 ವರ್ಷಗಳ ನಂತರ ಉಪೇಂದ್ರ ಅವರು, ಅದೇ ಪ್ರೀತಿ ಬಗ್ಗೆ ಹೊಸ ಅಂಶವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ಎನ್ನಲಾಗಿದೆ. ಅದೇನು ಎಂದು ತಿಳಿಯಬೇಕಿದ್ದರೆ ಈ ಟೀಸರ್ ಒಮ್ಮೆ ನೋಡಿ...
ಆರ್. ಚಂದ್ರು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದು, ಜೊತೆಗೆ ಪ್ರದೀಪ್ ರಾವತ್, ಶಯ್ನಾಜಿ ಶಿಂಧೆ, ರವಿಕಾಳೆ, ರವಿಶಂಕರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಕಿರಣ ತೊಟಮ್ ಬೈಲು ಸಂಗೀತವಿದೆ.