ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೆ ಎಷ್ಟು ಅಡಿಕ್ಟ್ ಆಗಿಬಿಟ್ಟಿದ್ದಾರೆ ಎಂದರೆ ಆ ಗೇಮ್ಗಳಲ್ಲಿ ಗೆಲ್ಲುವ ಹಠಕ್ಕೆ ಬಿದ್ದು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಂತಹದೇ ಒಂದು ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಮೊಬೈಲ್ ನಲ್ಲಿ ಟಿಕ್ ಟಾಕ್ ಗೇಮ್ ಆಡುತ್ತಿದ್ದ 12 ವರ್ಷದ ಬಾಲಕ ಕುಶಾಲ್ ಎಂಬಾತನೇ ನೇಣಿಗೆ ಶರಣಾದ ದುರ್ದೈವಿ. ಟಿಕ್ ಟಾಕ್ ಗೇಮ್ ಆಡುತ್ತಿದ್ದ ಆತ ಗೇಮ್ ನಲ್ಲಿ ನೀಡಿದ್ದ ಟಾಸ್ಕ್ ಪೂರ್ಣಗೊಳಿಸಲು ಹೋಗಿ ನೇಣಿಗೆ ಶರಣಾಗಿದ್ದಾನೆ.
ಮನೆಯವರೆಲ್ಲಾ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಸಂದರ್ಭದಲ್ಲಿ ತನ್ನ ಮನೆಯ ಕೊಠಡಿಯಲ್ಲಿ ಟಿಕ್ ಟಾಕ್ ಗೇಮ್ ಆಡುತ್ತಿದ್ದ ಕುಶಾಲ್, ಆ ಗೇಮ್ ನ ಚಾಲೆಂಜ್ ಮುಗಿಸಲು ತಡರಾತ್ರಿ ಎದ್ದು, ಆ ವೀಡಿಯೋದಲ್ಲಿ ತನ್ನ ಕೊರಳಿಗೆ ಮಂಗಳಸೂತ್ರ, ನೆಕ್ಲೇಸ್ ಮತ್ತು ಕೈಗಳಿಗೆ ಬಳೆಗಳನ್ನು ತೊಟ್ಟಿದ್ದಾನೆ. ಬಳಿಕ ಬಾತ್ ರೂಮಿಗೆ ತೆರಳಿ ಅಲ್ಲಿ ಕಬ್ಬಿಣದ ಸರಳಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಕುಶಾಲ್ ಬೆಳಿಗ್ಗೆ ಎಷ್ಟು ಹೊತ್ತಾದರೂ ಎದ್ದೇಳದೇ ಇದ್ದುದನ್ನು ಗಮನಿಸಿದ ಪೋಷಕರು ಆತನ ಕೊಠಡಿಗೆ ಹೋಗಿ ಹುಡುಕಿದ್ದಾರೆ. ಆದರೆ ಕುಶಾಲ್ ಅಲ್ಲಿಯೂ ಕಾಣದ್ದರಿಂದ ಆತಂಕಗೊಂಡ ಪೋಷಕರು ಮನೆಯಲ್ಲಾ ಹುಡುಕಾಡುವಾಗ ಬಾತ್ ರೂಂನಲ್ಲಿ ಕುಶಾನ್ ಶವ ನೇತಾಡುತ್ತಿದ್ದುದು ಕಂಡುಬಂದಿದೆ. ಕೂಡಲೇ ಆತನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.