ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಬಾರಿಯ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಪಕ್ಷದಲ್ಲಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಅಮಿತ್ ಶಾ ಮತ್ತು ರವಿಶಂಕರ್ ಪ್ರಸಾದ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮೇ 30 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೂ ಮೊದಲೇ ಇಬ್ಬರೂ ನಾಯಕರು ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.