ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ನೂತನ ಸರ್ಕಾರದಲ್ಲಿ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ಸರಕಾರದಲ್ಲಿ, ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ವಾಸ್ತವವಾಗಿ, ಮೇ 30 ರಂದು ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಬಗ್ಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಬಗ್ಗೆ ಇಂದೂ ಕೂಡ ಸಭೆ ಮುಂದುವರೆಯಲಿದೆ ಎನ್ನಲಾಗಿದೆ.
ಬಿಜೆಪಿಯ ಒಂದು ವಿಭಾಗವು ಪಕ್ಷ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಅಮಿತ್ ಶಾ ಕೂಡ ಮಂತ್ರಿ ಸ್ಥಾನ ಅಲಂಕರಿಸಬಹುದು ಎಂಬ ನಿರೀಕ್ಷೆ ಕೂಡಾ ಇದೆ. ಅದಾಗ್ಯೂ ಶಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಹುಶಃ ಸಚಿವ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ ಎರಡನೇ ಬಾರಿಗೆ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಮೋದಿ ಯವರು ತಮ್ಮ ಮಂತ್ರಿ ಮಂಡಲದ ರಚನೆ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ಮುಖಂಡರಿಗೆ ಸಚಿವ ಸ್ಥಾನ ನೀಡಬೇಕು, ಯಾವ ಇಲಾಖೆಯ ಉಸ್ತುವಾರಿಯನ್ನು ಯಾರು ಉತ್ತಮವಾಗಿ ನಿರ್ವಹಿಸಬಲ್ಲರು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಕ್ಯಾಬಿನೆಟ್ನಲ್ಲಿ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಯ ಉತ್ತಮ ಸಾಧನೆಯ ಕಾರಣ ಆ ರಾಜ್ಯದ ಸಂಸದರಿಗೆ ಮಂತ್ರಿ ಸ್ಥಾನ ಲಭಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಸರ್ಕಾರದ ಅತ್ಯಂತ ಪ್ರಮುಖ ಸದಸ್ಯರನ್ನು ಮಂತ್ರಿಗಳಾಗಿ ಉಳಿಸಿಕೊಳ್ಳಬಹುದೆಂದು ಅನೇಕ ನಾಯಕರು ನಂಬಿದ್ದಾರೆ.