ಝಾನ್ಸಿ:ಚಿರಗಾವ್ ಠಾಣಾ ಕ್ಷೇತ್ರದ ಭೈರವ ಡೇರಾ ಗ್ರಾಮದಿಂದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಇಲ್ಲಿ ಬಾವಿಯಲ್ಲಿ ಆಯತಪ್ಪಿ ಬಿದ್ದ ಯುವಕನನ್ನು ಸ್ಥಳೀಯರು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. ಈ ವೇಳೆ ಯುವಕನ ಹೊಟ್ಟೆಯಿಂದ ಕೋಬ್ರಾ ಹಾವು ಹೊರಬಂದಿದ್ದು, ನೆರೆದ ಜನರು ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಮುಕೇಶ್ ಕುಶ್ವಾಹ್ ಎಂಬ ಯುವಕ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ತರಾತುರಿಯಲ್ಲಿ ಯುವಕನನ್ನು ಮೇಲಕ್ಕೆ ಎತ್ತಿದ್ದಾರೆ. ಆದರೆ, ಇದೇ ವೇಳೆ ಆಕಸ್ಮಿಕವಾಗಿ ಯುವಕನ ಹೊಟ್ಟೆ ಭಾಗದಿಂದ ಕಪ್ಪು ಬಣ್ಣದ ಕೋಬ್ರಾ ಹಾವೊಂದು ಹೆಡೆ ಎತ್ತಿದೆ. ಆದರೆ ಈ ಹಾವು ಯುವಕನಿಗೆ ಯಾವುದೇ ರೀತಿಯ ಹಾನಿ ಮುಟ್ಟಿಸಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಆಕಸ್ಮಿಕವಾಗಿ ಜರುಗಿದ ಈ ಘಟನೆಯಿಂದ ಮುಕೇಶ್ ಭಾರಿ ನೊಂದುಕೊಂಡಿದ್ದಾನೆ ಎಂದ ಮುಕೇಶ್ ತಾಯಿ ,ಆತ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ರಾತ್ರಿ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಯುವಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಸಾವಿನ ಅಂಚಿಗೆ ಸಿಲುಕಿದ್ದಾನೆ. ಈ ವೇಳೆ ಭಾವಿಯಲ್ಲಿದ್ದ ಹಲವು ಹಾವುಗಳು ಆತನನ್ನು ಸುತ್ತುವರೆದಿವೆ. ರಾತ್ರಿ ಹೊತ್ತಿನಲ್ಲಿ ಬಾವಿಗೆ ಬಿದ್ದ ಮುಖೇಶ್ ಗಾಗಿ ಗ್ರಾಮಸ್ಥರು ಭಾನುವಾರ ಬೆಳಿಗ್ಗೆಯಿಂದ ಹುಡುಕಾಟ ಆರಂಭಿಸಿದ್ದಾರೆ. ಬಳಿಕ ಮುಕೇಶನ ಗದ್ದೆಯ ಹತ್ತಿರ ಬಾವಿಯಲ್ಲಿ ಗ್ರಾಮಸ್ಥರು ಆತನನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಬಾವಿಯಲ್ಲಿನ ದೃಶ್ಯ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಏಕೆಂದರೆ ಮುಕೇಶನ ಹತ್ತಿರ ಹಲವು ಹಾವುಗಳನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಆದರೆ, ಹರಸಾಹಸಪಟ್ಟು ಗ್ರಾಮಸ್ಥರು ಮುಕೇಶನನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. ಈ ವೇಳೆ ಮುಕೇಶನ ಹೊಟ್ಟೆ ಭಾಗದಿಂದ ಕಪ್ಪು ಬಣ್ಣದ ಕೋಬ್ರಾ ಹಾವು ಹೊರಬಂದಿದ್ದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಆದರೂ ಸಹಿತ ಧೈರ್ಯದಿಂದ ಗ್ರಾಮಸ್ಥರು ಬೆತ್ತಗಳ ಸಹಾಯದಿಂದ ಹಾವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾವಿಯಲ್ಲಿ ಬಿದ್ದ ಕಾರಣ ಮುಕೇಶನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ.