ಕೊಲ್ಕತ್ತಾ: ಇಂದು ರಾತ್ರಿ 10 ಗಂಟೆಯಿಂದಲೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದಿರುವ ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವು ಬಿಜೆಪಿ ನಿರ್ದೇಶನದಂತೆ ಆದೇಶ ಹೊರಡಿಸಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಆದೇಶ ಹೊರಡಿಸಿದ ಕೂಡಲೇ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಚುನಾವಣಾ ಆಯೋಗ ಬಿಜೆಪಿಯ ನಿಯಂತ್ರಣದಲ್ಲಿದೆ. ಇದು ಅಸಮರ್ಪಕ ನಿರ್ಧಾರವಾಗಿದೆ. ಅಮಿತ್ ಶಾ ಕಾರಣದಿಂದ ಮಂಗಳವಾರ ಕೊಲ್ಕತ್ತಾದಲ್ಲಿ ಹಿಂಸಾಚಾರ ನಡೆದಿದೆ. ಆದರೆ, ಚುನಾವಣಾ ಆಯೋಗ ಮಾತ್ರ ಏಕೆ ಅಮಿತ್ ಶಾಗೆ ನೋಟಿಸ್ ನೀಡಿಲ್ಲ ಎಂದು ಮಮತಾ ಪ್ರಶ್ನಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನನ್ನು ಕಂಡರೆ ಮತ್ತು ಪಶ್ಚಿಮ ಬಂಗಾಳ ಎಂದರೆ ಭಯವಿದೆ. ಬಹಿರಂಗ ಚುನಾವಣಾ ಪ್ರಚಾರ ಮೊಟಕುಗೊಳಿಸುವ ನಿರ್ಧಾರ ಚುನಾವಣಾ ಆಯೋಗದ್ದಲ್ಲ, ಪ್ರಧಾನಿ ಮೋದಿ ಅವರದ್ದು. ರೋಡ್ ಶೋ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ನೇರ ಹೊಣೆ. ಕೊಲ್ಕತ್ತಾದಲ್ಲಿ ಹಂಗಾಮ ನಡೆಸಿದ್ದೇ ಬಿಜೆಪಿ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರೇ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು" ಎಂದು ಮಮತಾ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ನಂತರ ಪ್ರಚಾರಕ್ಕೆ ಅವಕಾಶ ನೀಡದ ಚುನಾವಣಾ ಆಯೋಗದ ನಿರ್ಧಾರ ಅನ್ಯಾಯ, ಅನೈತಿಕ ಹಾಗೂ ರಾಜಕೀಯ ಪಕ್ಷದಿಂದ ಕೂಡಿದೆ ಎಂದ ಮಮತಾ ಬ್ಯಾನರ್ಜಿ, ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.