ನವದೆಹಲಿ: ದೆಹಲಿ-ಎನ್ಸಿಆರ್ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಕೆಲವು ದಿನಗಳ ಮಳೆಯೇ ಇಲ್ಲದೆ ಬಿಸಿಲಿಗೆ ಬೇಗೆಗೆ ಬೇಸತ್ತಿದ್ದ ಜನರಿಗೆ ವರುಣನ ಸಿಂಚನದಿಂದ ಸಂತಸ ಉಂಟಾಗಿದೆ. ದೆಹಲಿ, ಘಾಜಿಯಾಬಾದ್, ನೋಯ್ಡಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 6:30ರ ಸುಮಾರಿಗೆ ಮಳೆ ಪ್ರಾರಂಭವಾಯಿತು. ಆದಾಗ್ಯೂ, ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆ ಬುಧವಾರ(ಆಗಸ್ಟ್ 22), ದೆಹಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ 16 ರಾಜ್ಯಗಳ ಕೆಲವು ಭಾಗಗಳಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎಂದು ಹೇಳಿತ್ತು. ಉತ್ತರಾಖಂಡ್, ಹರಿಯಾಣ, ಚಂಡೀಘಢ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಗಸ್ಟ್ 26ವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ.
ಸ್ಕೈಮ್ಯಾಟ್ನ ಹವಾಮಾನ ವಿಜ್ಞಾನಿಗಳ ಪ್ರಕಾರ, ಬಂಗಾಳ ಕೊಲ್ಲಿಯ ಚಂಡಮಾರುತದ ಕಾರಣ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೇವಾಂಶವುಳ್ಳ ಗಾಳಿ ಚಲಿಸುತ್ತಿವೆ. ಹಾಗಾಗಿ, ಮುಂದಿನ ಕೆಲವು ದಿನಗಳವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಪಾದ ವಾತಾವರಣ ಕಂಡು ಬರಲಿದೆ ಎಂದು ಹೇಳಿದೆ.