ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಸಂಬಂಧ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ದಿನ ವಜಾಗೊಳಿಸಿ ತೀರ್ಪು ನೀಡಿದೆ. ಆ ತೀರ್ಪನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
‘ಚಿನ್ನದಂತೆ ಹೊಳೆಯುವ ಸತ್ಯ ಹೊರಬಿದ್ದಿದೆʼ ಎಂದ ಶಾ, ‘ನರೇಂದ್ರ ಮೋದಿ ಅವರು ಕಳೆದ 19 ವರ್ಷಗಳಿಂದ ಒಂದೂ ಮಾತನಾಡದೆ ನೋವನ್ನು ಸಹಿಸಿಕೊಂಡು ‘ವಿಷ ನುಂಗಿದ ಶಿವನಂತೆ ಜೀವಿಸುತ್ತಿದ್ದರುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Team India: ರೋಹಿತ್ ನಾಯಕತ್ವದಲ್ಲಿ ಅಪಾಯದಲ್ಲಿದೆ ಈ ಬಲಿಷ್ಠ ಆಟಗಾರನ ವೃತ್ತಿಜೀವನ!
2002ರ ಗಲಭೆಯ ನಂತರ ಅಂದಿನ ಗುಜರಾತ್ ಮುಖ್ಯಮಂತ್ರಿ ವಿರುದ್ಧ "ರಾಜಕೀಯ ಪ್ರೇರಿತ" ಆರೋಪಗಳನ್ನು ಮಾಡಿದ ಜನರು ಕ್ಷಮೆಯಾಚಿಸಬೇಕು ಎಂದು ಶಾ ಒತ್ತಾಯಿಸಿದರು.
"ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಇದು 19 ವರ್ಷಗಳ ಯುದ್ಧವಾಗಿತ್ತು. ಅಂತಹ ದೊಡ್ಡ ನಾಯಕ ಒಂದು ಮಾತನಾಡದೆ, ಶಿವನು ವಿಷ ಕುಡಿದಂತೆ ನೋವು ಸಹಿಸಿಕೊಂಡಿದ್ದರು. ಈಗ ಕೊನೆಯಲ್ಲಿ ಸತ್ಯವು ಹೊಳೆಯುವ ಚಿನ್ನದಂತೆ ಹೊರಬಂದಿದೆ" ಎಂದು ಗೃಹ ಸಚಿವರು ಹೇಳಿದರು.
"ಮೋದಿಜಿ ಈ ನೋವನ್ನು ಸಹಿಸಿಕೊಂಡು, ಸತ್ಯದ ಪರವಾಗಿದ್ದರೂ ಆರೋಪಗಳನ್ನು ಎದುರಿಸುತ್ತಿರುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅವರು ಮಾತನಾಡಲಿಲ್ಲ. ದೃಢ ಹೃದಯವುಳ್ಳ ವ್ಯಕ್ತಿ ಮಾತ್ರ ಇದನ್ನು ಮಾಡಲು ಸಾಧ್ಯ. ಮೋದಿಜಿ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡರು”ಎಂದರು.
2002ರ ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸಾವನ್ನಪ್ಪಿದ 69 ಜನರಲ್ಲಿ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದರು. ಎಹ್ಸಾನ್ ಜಾಫ್ರಿಯವರ ಪತ್ನಿ ಝಾಕಿಯಾ ಜಾಫ್ರಿ. ಇನ್ನು ನ್ಯಾಯಮೂರ್ತಿಗಳಾದ ಎಎಮ್ ಖಾನ್ವಿಲ್ಕರ್ ನೇತೃತ್ವದ ಪೀಠವು ಮೇಲ್ಮನವಿಯನ್ನು ತಿರಸ್ಕರಿಸಿದೆ.
ನ್ಯಾಯಾಲಯದ ತೀರ್ಪಿನ ಪ್ರಕಾರ, ಗುಜರಾತ್ ಗಲಭೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸಚಿವರು ಹೇಳಿದರು.
" ಇದು (ಜೂನ್ 24ರ ಸುಪ್ರೀಂ ತೀರ್ಪು) ಬಹಳ ಮಹತ್ವದ್ದಾಗಿದೆ. ನನ್ನ ಪಕ್ಷದ ಅತ್ಯುನ್ನತ ನಾಯಕನನ್ನು ಬಲಿಪಶು ಮಾಡಲು ಸಂಚು ರೂಪಿಸಲಾಗಿತ್ತು. ನ್ಯಾಯಾಲಯ ಅದನ್ನು ಕಿತ್ತುಹಾಕಿದೆ. ಈ ತೀರ್ಪು ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ನಾನು ನಂಬುತ್ತೇನೆ. ನಮ್ಮ ನಾಯಕನ ಮೇಲಿನ ಸುಳ್ಳು ಆರೋಪಗಳನ್ನು ತಳ್ಳಿಹಾಕಲಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಡಾಲ್ಫಿನ್‌ಗಳ ಮಾರಣಹೋಮ: ಸಾಗರದ ಜೀವಿಗಳ ಮೇಲೂ ಪ್ರಭಾವ ಬೀರಿದ ರಷ್ಯಾ-ಉಕ್ರೇನ್ ವಾರ್!
"ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಸರ್ಕಾರವು ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಸರಿಯಾಗಿ ಅನುಸರಿಸಿದೆ. ತೀರ್ಪು ಸುಮಾರು 300 ಪುಟಗಳನ್ನು ಒಳಗೊಂಡಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಪ್ರತಿಯೊಂದು ಅಂಶವನ್ನೂ ವಿವರಿಸಿದೆ. ಮೋದಿಜಿ ಸಾಕಷ್ಟು ಸಭೆಗಳನ್ನು ನಡೆಸಿದ್ದರು. ಶಾಂತಿಗಾಗಿ ಮನವಿ ಮಾಡಿದ್ದರು. ಇಂದು ಸತ್ಯ ಗೆದ್ದಿದೆ ಮತ್ತು ಮೋದಿಜಿ ಜಯಶಾಲಿಯಾಗಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.