ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣಾ ಮತಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಉತ್ತರಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಹೀನಾಯ ಸೋಲನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ಅಮೇಥಿ ಜನರನ್ನು ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಅಮೇಥಿ ಕ್ಷೇತ್ರದಲ್ಲಿ ಸೋಲು ಖಚಿತವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಸ್ಮೃತಿ ಇರಾನಿ ಅವರನ್ನು ಅಭಿನಂದಿಸುತ್ತೇನೆ, ಜನರ ಆದೇಶವನ್ನು ಗೌರವಿಸುತ್ತೇನೆ. ಸ್ಮೃತಿ ಇರಾನಿ ಅವರು, ಅಮೇಥಿ ಜನರನ್ನು ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವಂತೆ ಮನವಿ ಮಾಡಿದರಲ್ಲದೆ, ಅಮೇಥಿ ಜನರ ಪ್ರೀತಿಯನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಬಹುಮತ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಜನಾದೇಶವನ್ನು ನಾನು ಗೌರವಿಸುತ್ತೇನೆ. ನಾನು ಅಂದುಕೊಂಡಂತೆ ನಡೆಯಲಿಲ್ಲ ಎಂದು ಚರ್ಚಿಸುವ ಸಮಯ ಇದಲ್ಲ. ಭಾರತದ ಜನತೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿರುವ ರಾಹುಲ್ ಗಾಂಧಿ, ಮೊದಲ ಬಾರಿ ಅಂದರೆ 2004 ರಲ್ಲಿ ಅಮೇಥಿಯಿಂದ ಸ್ಪರ್ಧೆ ಮಾಡಿ ಸಂಸತ್ ಪ್ರವೇಶ ಮಾಡಿದ್ದರು. ಇನ್ನು, 2014 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ ಮಾಡಿ ಸೋಲನುಭವಿಸಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸ್ಮೃತಿ ಇರಾನಿ ರಾಹುಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 1998ರ ಬಳಿಕ ಅಮೇಥಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷ ಗೆಲುವು ದಾಖಲಿಸಿದೆ.