ಹವಾಲ ಡೀಲ್ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್'ಗೆ ಹಣ ಸಂದಾಯ ಮಾಡಿದ್ದಾರೆ: ಬಿಜೆಪಿ ಆರೋಪ

ರಾಹುಲ್​ ಗಾಂಧಿ ಕುಟುಂಬಕ್ಕೆ ಕರ್ನಾಟಕದ ಕಾಂಗ್ರೆಸ್​ ಎಟಿಎಂ ಆಗಿದೆ ಎಂದು ಬಿಜೆಪಿ ಆರೋಪಿಸಿದೆ. 

Last Updated : Sep 19, 2018, 06:21 PM IST
ಹವಾಲ ಡೀಲ್ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್'ಗೆ ಹಣ ಸಂದಾಯ ಮಾಡಿದ್ದಾರೆ: ಬಿಜೆಪಿ ಆರೋಪ title=

ನವದೆಹಲಿ: ಕರ್ನಾಟಕ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ತೆರಿಗೆ ವಂಚನೆ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿದ ಬೆನ್ನಲೇ, ಕಾಂಗ್ರೆಸ್ ಹವಾಲ ಹಣ ಚಲಾವಣೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. 

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ರಾಹುಲ್​ ಗಾಂಧಿ ಕುಟುಂಬಕ್ಕೆ ಕರ್ನಾಟಕದ ಕಾಂಗ್ರೆಸ್​ ಎಟಿಎಂ ಆಗಿದೆ. ಹೈಕಮಾಂಡ್​ಗೆ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಹಣ ಸಂದಾಯ ಆಗುತ್ತಿದೆ. ಇದರಿಂದ ಕಪ್ಪುಹಣ ಮತ್ತು ಕಾಂಗ್ರೆಸ್​ ನಂಟು ಬಯಲಾಗಿದೆ. ಅಂದಾಜು 600 ಕೋಟಿ ರೂಪಾಯಿಯನ್ನು ಡಿಕೆಶಿ ಸಂದಾಯ ಮಾಡಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಆದಾಯ ತೆರಿಗೆ ಇಲಾಖೆಯ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಆಂಜನೇಯ, ಡಿ.ಕೆ. ಶಿವಕುಮಾರ್ ಅವರಿಂದ ಪಡೆದ ಹಣವನ್ನು ಚಾಂದಿನಿ ಚೌಕ್‌ ನಿಂದ ಎಐಸಿಸಿ ಕಚೇರಿಗೆ ಸಾಗಿಸುತ್ತಿದ್ದರು. ಮತ್ತೊಬ್ಬ ಅಧಿಕಾರಿ ರಾಜೇಂದ್ರ ಸಹ ಕಚೇರಿಗೆ ಹಣ ತಂದಿದ್ದರು. ರಾಜೇಂದ್ರ ಹಣ ತಂದಾಗ ಜಗದೀಶ್ ಚಾಂದ್ ಕೂಡ ಜತೆಗಿದ್ದ ಎಂದು ಪಾತ್ರಾ ಸುದ್ದಿಗೊಷ್ಠಿಯಲ್ಲಿ ವಿವರಿಸಿದರು.

ಹಾಗೇ ಡಿ.ಕೆ.ಶಿವಕುಮಾರ್ ಅವರ ಡೈರಿ ಬಗ್ಗೆ ಪ್ರಸ್ತಾಪಿಸಿದ ಪಾತ್ರಾ, ಡೈರಿಯಲ್ಲಿ ಎಸ್‌ಜಿ ಮತ್ತು ಆರ್‌ಜಿ ಎಂದು ನಮೂದಿಸಲಾಗಿದೆ. ಎಸ್‌ಜಿ ಅಂದರೆ ಸೋನಿಯಾ ಗಾಂಧಿ ಮತ್ತು ಆರ್‌ಜಿ ಎಂದರೆ ರಾಹುಲ್ ಗಾಂಧಿ ಎಂದು ಡೈರಿ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು. ಎಐಸಿಸಿಗೆ ವಿವಿಧ ಮೂಲಗಳಿಂದ 600 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂದಾಯವಾಗಿದೆ. ಹಣದ ಮೊತ್ತವನ್ನು ಕೆ.ಜಿ ಎಂಬ ಕೋಡ್‌ವರ್ಡ್‌ನಲ್ಲಿ ನಮೂದು ಮಾಡಲಾಗುತ್ತಿತ್ತು ಎಂದು ಹೇಳಿದರಲ್ಲದೆ, ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿರುವುದಕ್ಕೆ ಸಾಕ್ಷ್ಯ ಇದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಬೇಕಿದೆ ಎಂದು ಪಾತ್ರಾ ಹೇಳಿದರು.
 

Trending News