ಕೃಷ್ಣಗಿರಿ: ತಮಿಳುನಾಡಿನ ಜನರನ್ನು ನಾಗಪುರದವರು ಆಳಲು ಬಿಡುವುದಿಲ್ಲ. ತಮಿಳುನಾಡನ್ನು ಇಲ್ಲಿಯವರೇ ಆಳುತ್ತಾರೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಎಂ.ಕೆ. ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ ರಾಹುಲ್ ಗಾಂಧಿ, 2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ತಮಿಳುನಾಡಿನಲ್ಲಿ ಮುಂದಿನ ಸರ್ಕಾರದ ನೇತೃತ್ವ ವಹಿಸಲಿದ್ದಾರೆ ಎಂದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಡಿಎಂಕೆ ಮೈತ್ರಿಕೂಟದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.
Congress President Rahul Gandhi in Krishnagiri: We will never ever let the people of Tamil Nadu be ruled by Nagpur. Tamil Nadu is going to be ruled from Tamil Nadu & MK Stalin is going to be the Chief Minister of Tamil Nadu. pic.twitter.com/GJlZ8qs3Lk
— ANI (@ANI) April 12, 2019
"ನಮ್ಮ ಮೈತ್ರಿ ತಮಿಳುನಾಡಿನ ಜನರ ಮೈತ್ರಿ. ಸ್ವಾತಂತ್ರ್ಯ, ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಎರಡೂ ಪಕ್ಷಗಳೂ ನಂಬಿಕೆ ಹೊಂದಿವೆ. ನಾಗ್ಪುರದ ಜನರು ತಮಿಳುನಾಡಿನ ಜನರನ್ನು ಆಳಲು ನಾವು ಎಂದಿಗೂ ಬಿಡುವುದಿಲ್ಲ" ಎಂದು ಹೇಳುವ ಮೂಲಕ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಏಳು ಹಂತದ ಲೋಕಸಭಾ ಚುನಾವಣೆಯಲ್ಲಿ ಏಪ್ರಿಲ್ 18ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ 39 ಸಂಸತ್ ಸ್ಥಾನಗಳಿಗೆ ತಮಿಳುನಾಡಿನಲ್ಲಿ ಮತದಾನ ನಡೆಯಲಿದೆ. ಏತನ್ಮಧ್ಯೆ, 18 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆ ನಡೆಯಲಿದೆ.