ತಮಿಳುನಾಡಿನಲ್ಲಿ 'ಗಜ'ನ ಅಟ್ಟಹಾಸಕ್ಕೆ 11 ಮಂದಿ ಸಾವು

ಸೈಕ್ಲೋನ್​ ಪರಿಣಾಮದಿಂದಾಗಿ ನಾಗಪಟ್ಟಿಣಂ, ತಿರುವರೂರು ಹಾಗೂ ತಂಜಾವೂರಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮರಗಳು ಬುಡಮೇಲಾಗಿ ಬಿದ್ದು, ಮನೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ.

Last Updated : Nov 16, 2018, 01:06 PM IST
ತಮಿಳುನಾಡಿನಲ್ಲಿ 'ಗಜ'ನ ಅಟ್ಟಹಾಸಕ್ಕೆ 11 ಮಂದಿ ಸಾವು title=
Pic: IANS

ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ ತಡರಾತ್ರಿ ಕರಾವಳಿಯಲ್ಲಿ ಅಪ್ಪಳಿಸಿದ 'ಗಜ' ಚಂಡಮಾರುತ ಮತ್ತು ಅಲ್ಲಲ್ಲಿ ಉಂಟಾದ ಭೂಕುಸಿತದಿಂದಾಗಿ 11 ಮಂದಿ ಸಾವನ್ನಪ್ಪಿದ್ದಾರೆ. 

ನಾಗಪಟ್ಟಿಣಂ ಕರಾವಳಿ ಭಾಗ ಹಾಗೂ ವೇದರನ್ನಿಯಂ ಬಳಿ ಗಂಟೆಗೆ 120 ಕಿ.ಮೀ ವೇಗದಲ್ಲಿ 'ಗಜ' ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನಾಗಪಟ್ಟಿಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವರೂರ್ ಸೇರಿದಂತೆ 6 ಜಿಲ್ಲೆಗಳ 76,290 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 300 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಮುಂದಿನ ಆರು ಗಂಟೆಗಳಲ್ಲಿ ಪಶ್ಚಿಮದತ್ತ ಗಜ ಪಯಣ ಮುಂದುವರೆಯಲಿದ್ದು, ಕ್ರಮೇಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಉಪ ಮಹಾನಿರ್ದೇಶಕ ಎಸ್​. ಬಾಲಚಂದ್ರನ್ ಹೇಳಿದ್ದಾರೆ.

ಸೈಕ್ಲೋನ್​ ಪರಿಣಾಮದಿಂದಾಗಿ ನಾಗಪಟ್ಟಿಣಂ, ತಿರುವರೂರು ಹಾಗೂ ತಂಜಾವೂರಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮರಗಳು ಬುಡಮೇಲಾಗಿ ಬಿದ್ದು, ಮನೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಪಂಬನ್ ಮತ್ತು ಕಡಲೂರು ಮಧ್ಯದಲ್ಲಿ ಚಂಡಮಾರುತ ಅಪ್ಪಳಿಸಿದೆ. 7 ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಇನ್ನು, ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ 30,500 ಮಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಚಂಡಮಾರುತದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಏತನ್ಮಧ್ಯೆ ಚಂಡಮಾರುತ ಸಂದರ್ಭದಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಲು ಹವಾಮಾನ ಇಲಾಖೆ ಅನಿಮೇಶನ್ ವೀಡಿಯೋ ಬಿಡುಗಡೆಮಾಡಿದೆ. ಜನರ ಅನುಕೂಲಕ್ಕಾಗಿ ಸರ್ಕಾರವು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದು, ರಾಜ್ಯಮಟ್ಟದಲ್ಲಿ 1070 ಹಾಗೂ ಜಿಲ್ಲೆಗಳಲ್ಲಿ 1077 ಸಂಖ್ಯೆ ಬಳಸಬಹುದು.

Trending News