ಜಮ್ಮು: ಕಳೆದ 15 ದಿನಗಳಲ್ಲಿ 1.90 ಲಕ್ಷ ಯಾತ್ರಾರ್ಥಿಗಳು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಮಂಗಳವಾರವೂ ಸಹ 3,967 ಯಾತ್ರಿಗಳ ಮತ್ತೊಂದು ಬ್ಯಾಚ್ ಜಮ್ಮುವಿನಿಂದ ಕಣಿವೆಗೆ ತೆರಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀ ಅಮರನಾಥಜೀ ದೇಗುಲ ಮಂಡಳಿ ಅಧಿಕಾರಿಗಳು, ಈ ವರ್ಷ ಜುಲೈ 1 ರಂದು ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 1,93,545 ಯಾತ್ರಾರ್ಥಿಗಳು ಗುಹೆ ದೇಗುಲದೊಳಗೆ ದರ್ಶನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಜಮ್ಮುವಿನಲ್ಲಿರುವ ಭಗವತಿ ನಗರ ಯಾತ್ರಿ ನಿವಾಸ್‌ನಿಂದ 3,967 ಯಾತ್ರಾರ್ಥಿಗಳ ಮತ್ತೊಂದು ಬ್ಯಾಚ್ ಕಣಿವೆಯಲ್ಲಿ ಎರಡು ಬೆಂಗಾವಲು ಪಡೆಗಳೊಂದಿಗೆ ದರ್ಶನಕ್ಕೆ ತೆರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಪೈಕಿ 1,615 ಯಾತ್ರಿಗಳು ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದು, 2,352 ಮಂದಿ ಪಹಲ್ಗಮ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಅಮರನಾಥ ಯಾತ್ರೆ ಆಗಸ್ಟ್ 15 ರಂದು ಮುಕ್ತಾಯಗೊಳ್ಳಲಿದೆ.