ನವದೆಹಲಿ: 2019 ರ ಲೋಕಸಭಾ ಚುನಾವಣೆಯ ಮೂರು ಹಂತಗಳು ಈಗಾಗಲೇ ಪೂರ್ಣಗೊಂಡಿದ್ದು, ನಾಲ್ಕು ಮತ್ತು ಐದನೇ ಹಂತಕ್ಕೆ ರಾಜಕೀಯ ಪಕ್ಷಗಳು ಭರದ ಪ್ರಚಾರದಲ್ಲಿ ಪಾಲ್ಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಸಹ ಇದರಿಂದ ಹೊರತಾಗಿಲ್ಲ.
ಉತ್ತರಪ್ರದೇಶ ಲೋಕಸಭೆಯ 80 ಸ್ಥಾನಗಳಿಗೆ ಭಾರೀ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಏಪ್ರಿಲ್ 26 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಪ್ರವಾಸದ ಬಳಿಕ ಮೇ 1ರಂದು ಅಯೋಧ್ಯೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅಯೋಧ್ಯೆಯಲ್ಲಿ ಬ್ರುಃತ್ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ಮೇ ತಿಂಗಳಿನಲ್ಲಿ ಅಯೋಧ್ಯೆ ಮತ್ತು ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ಜಂಟಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಕಳೆದ ಐದು ವರ್ಷಗಳಿಂದ ಜನತೆಗೆ ರಾಮ ಮಂದಿರ ನಿರ್ಮಾಣ ಕುರಿತಂತೆ ಭರವಸೆ ನೀಡಿರುವ ಮೋದಿ, ಇದುವರೆಗೆ ಒಂದು ಬಾರಿಯೂ ಅಯೋಧ್ಯೆಗೆ ಭೇಟಿ ನೀಡಿಲ್ಲ.
2014 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ರಾಮಮಂದಿರ ನಿರ್ಮಾಣದ ಭರವಸೆ ನೀಡಿತ್ತು. ಇದಾದ ಬಳಿಕವೂ ಇನ್ನೂ ಈ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ. ಏತನ್ಮಧ್ಯೆ ಸಾಧು-ಸಂತರು ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಸರ್ಕಾರ ನ್ಯಾಯಾಲಯದ ತಿರ್ಪಿಗಾಗಿ ಕಾಯುತ್ತಿದೆ ಎನ್ನಲಾಗಿದೆ.