ನವದೆಹಲಿ: ತಿರುವನಂತಪುರಂನಲ್ಲಿನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಆನಂದ್ ಪಟವರ್ಧನ್ ಅವರ ಸಾಕ್ಷ್ಯಚಿತ್ರ ವಿವೇಕ್ (ಕಾರಣ) ಪ್ರದರ್ಶಿಸಲು ಕೇರಳ ಹೈಕೋರ್ಟ್ ಮಂಗಳವಾರದಂದು ಅನುಮತಿ ನೀಡಿದೆ.
ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು, ಈ ಸಾಕ್ಷ್ಯ ಚಿತ್ರವು ಹಲವು ಸೂಕ್ಷ್ಮ ಸಂಗತಿಗಳನ್ನು ಹೊಂದಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಅದು ಉಲ್ಲೇಖಿಸಿತ್ತು ಎನ್ನಲಾಗಿದೆ. ತಿರುವಂತಪುರದಲ್ಲಿ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವ ಜೂನ್ 21 ರಿಂದ ಜೂನ್ 26 ರವರೆಗೆ ನಡೆಯುತ್ತಿದೆ.
ಸಾಕ್ಷ್ಯ ಚಿತ್ರ ಸ್ಕ್ರೀನಿಂಗ್‌ನಿಂದಾಗಿ ಯಾವುದೇ ಕಾನೂನು ಸುವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳುವಂತೆ ಕೇರಳ ಸರ್ಕಾರಕ್ಕೆ ನ್ಯಾಯಮೂರ್ತಿ ಶಾಜಿ ಪಿ.ಚಾಲಿ ಅವರು ಷರತ್ತು ಸಹಿತ ನಿರ್ದೇಶನ ನೀಡಿದ್ದಾರೆ. ಸೆನ್ಸಾರ್ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಅನುಮತಿಯಿಲ್ಲದೆ ಸಾಕ್ಷ್ಯಚಿತ್ರವನ್ನು ಬೇರೆಲ್ಲಿಯೂ ಪ್ರದರ್ಶಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವಾಗ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಎಲ್ಲಾ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅದು ಹೇಳಿದೆ.
ಹಿಂದೂ ಬಲಪಂಥೀಯ ಅಂಶಗಳಿಂದ ವೈಚಾರಿಕ ವಿದ್ವಾಂಸರ ಹತ್ಯೆಯನ್ನು ಎತ್ತಿ ತೋರಿಸುವ ಸಾಕ್ಷ್ಯಚಿತ್ರಕ್ಕೆ ಸೆನ್ಸಾರ್ ವಿನಾಯಿತಿ ನೀಡುವಲ್ಲಿನ ಅತಿಯಾದ ವಿಳಂಬವನ್ನು ಕೊನೆಗೊಳಿಸಲು ಕೋರಿ ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ಪ್ರಕರಣದಲ್ಲಿ ಆನಂದ್ ಪಟವರ್ಧನ್ ಅವರು ಎರಡನೇ ಅರ್ಜಿದಾರರಾಗಿದ್ದರು.