ತಿರುವನಂತಪುರಂ: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ನಾಲ್ವರು ತೃತೀಯ ಲಿಂಗಿಗಳು ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆಡು, ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಡಿಸೆಂಬರ್ 16 ರಂದು ಅಯ್ಯಪ್ಪನ ದರ್ಶನ ಪಡೆಯಲು ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕ ಎಂಬ ತೃತೀಯ ಲಿಂಗಿಗಳು ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತಿಕೊಂಡು ಬಂದಿದ್ದರು. ಆದರೆ ಇವರ ಪ್ರವೇಶವನ್ನು ಪೊಲೀಸರು ತಡೆದಿದ್ದರು. ಆದರೆ ಇಂದು ದೇವಾಲಯ ಪ್ರವೇಶಕ್ಕೆ ಅನುಮತಿ ದೊರೆತ ಬಳಿಕ ನಿಲಾಕ್ಕಲ್ ನಿಂದ ಪಂಪಾನದಿಯವರೆಗೂ ಪೊಲೀಸ್ ಭದ್ರತೆಯಲ್ಲಿ ಆಗಮಿಸಿ, ಇಂದು ಬೆಳಿಗ್ಗೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
#UPDATE The transgender delegation offers prayers at the #Sabarimala temple. #Kerala pic.twitter.com/yFDVU0Twd3
— ANI (@ANI) December 18, 2018
ಪೂಜೆ ಮಾಡುವ ಅವಕಾಶ ದೊರೆತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ನಾಲ್ವರು ತೃತೀಯ ಲಿಂಗಿಗಳು ಶಬರಿಮಲೆಗೆ ಬರುವುದು ತಮ್ಮ ಜೀವನದ ಗುರಿಯಾಗಿತ್ತು. ಆ ಅಭಿಲಾಷೆ ಈಡೇರಿದಂತಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ತೃತೀಯ ಲಿಂಗಿಗಳು ಕೇರಳ ಹೈಕೋರ್ಟ್ ನಿಯೋಜಿತ ಮೇಲುಸ್ತುವಾರಿ ಸಮಿತಿ ಸದಸ್ಯ, ಡಿಜಿಪಿ ಎ. ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಸೋಮವಾರ ಭೇಟಿ ಮಾಡಿದ ನಂತರ ದೇವಾಲಯಕ್ಕೆ ಬರಲು ಅವಕಾಶ ನೀಡಲಾಗಿದೆ.